Thursday 11 July 2024

Park School

 DINK

ಅವರಿಬ್ಬರೂ ಇಷ್ಟಪಟ್ಟು ಹೊರದೇಶದಲ್ಲಿ ಮದುವೆಯಾದವರು . ಇದು ಸಹಜ , ಕಾರಣ IT ಕಂಪನಿಯಲ್ಲಿ ಕೆಲಸಮಾಡುತ್ತಿದ್ದುದರಿಂದ. ಅವರಿಗೆ ಮಕ್ಕಳು ಬೇಕಿಲ್ಲ ; ಮಕ್ಕಳ ಆರೈಕೆಯಲ್ಲಿ ತಮ್ಮ ಯವ್ವನ ಕಳೆದುಕೊಳ್ಳಲು ಇಷ್ಟವಿಲ್ಲ .  ಇದೊಂದು ವಿಚಾರ್ ಅವರಿಗೆ ತಮ್ಮ ಯವ್ವನದ ದಿನಗಳಲ್ಲಿ ಮೂಡಿತ್ತು . ಆಧುನಿಕ ಕಾಲದಲ್ಲಿ , ಆಧುನಿಕ ವೃತ್ತಿಯಲ್ಲಿ ಇದ್ದ ಕಾರಣ ಅದು ಸಹಜವಾಗಿತ್ತು . ಆಗಲೇ DINK (ಡಬಲ್ ಇನ್ಕಮ್ ನೋ ಕಿಡ್ಸ್ ) ಅನ್ನುವ ಸಂಘಟನೆಗಳು ಹುಟ್ಟಿಕೊಂಡು , ಅದೇ ವಿಚಾರ್ ಹೊಂದಿರುವ  ಜನರ ಸಮೂಹ ದೊಡ್ಡದಾಗುತ್ತ ಜ್ಯಾತಿ , ಭಾಷೆ , ಗಡಿ ಎಲ್ಲವನ್ನು ಮೀರಿ ಬೆಳೆಯುತ್ತಾಯಿತ್ತು . 


ಕಾರಣಾಂತರಗಳಿಂದ ಭಾರತಕ್ಕೆ ಬಂದಮೇಲೆ , ತಮ್ಮ ೪೦ ರ ಪ್ರಾಯದಲ್ಲಿ ಒಂದು ಮಗು ಬೇಕು ಅನ್ನುವ ಆಸೆ ಹೇಗೋ ಹುಟ್ಟಿತು . ಅದಕ್ಕಾಗಿ ಅವರು ಪಟ್ಟ ಕಷ್ಟ ಅಷ್ಟಿಷ್ಟಲ್ಲ . ಯಾವುದೇ ಹೊಸ ತಂತ್ರಜ್ಞಾನವಿದ್ದರೂ , ಅದು ಅವರಿಗೆ ಉಪಯೋಗ ಬರಲಿಲ್ಲ .


ಕಟ್ಟಡ ಕಾರ್ಮಿಕರ ಮಕ್ಕಳ ಶಿಕ್ಷಣದ ಬಗ್ಗೆ ತಿಳಿದುಕೊಳ್ಳಲು ಉತ್ಸುಕನಾಗುತ್ತಾನೆ . 



ಕೊನೆಗೆ ತಮ್ಮ ವಿಚಾರ್ ಬದಿಗಿಟ್ಟು , ಮಕ್ಕಳಿಗಾಗಿ ಏನಾದರೂ ಮಾಡುವ ತುಡಿತದಲ್ಲಿದ್ದರು .  






Saturday 8 June 2024

ಅಂಧಕಾರ

ಸಮಾಜದ ಕಣ್ಣಿಗೆ ಗುರಿಯಾಗಿ ದಿಕ್ಕುಗಾಣದೆ ಅಲೆಯುತ್ತ , ನಿಂದನೆಗಳನ್ನ ನೀರು ಕುಡಿದಂತೆ ಸಲೀಸಾಗಿ ಬದುಕು ಸವೆಸುತ್ತ, ಪರ್ವತ ಗಿರಿಯ ಮಲ್ಲನಿಗೆ ಮನಸೋತು ಅವನನ್ನೇ ಮನದಣಿಯನನ್ನಾಗಿ  ಮಾಡಿಕೊಂಡು ಭಕ್ತಿಯ ಪ್ರಕರ್ಷಯಲ್ಲಿ ಮೈ ಮರೆತಿದ್ದಳು ಅಕ್ಕ . ಭಕ್ತಿಯ ಸಂಗಡ ಹುಡುಕುತ್ತ , ಕಲ್ಯಾಣವನ್ನ ಸೇರಿ ಶರಣರ ಸಂಗದಿಂದ ಶರಣೆಯಾಗಿ , ಮಲ್ಲಿಕಾರ್ಜುನನ ಶಿರದ ಚಂದ್ರನಂತೆ ಪ್ರಕಾಶಿಸಿ ಆವರಿಸಿರುವ ಅಂಧಕಾರವನ್ನು ಬಯಲುಮಾಡಿದಳು. ಅಕ್ಕಳ ಕಥೆ ಸುಮಾರು ೮೦೦ ತಲೆಮಾರಿನ ಹಿಂದಿನ ಮಾತು . 

ಎಲ್ಲರೂ ಸಮ , ಗಂಡು ಹೆಣ್ಣು ಭೇದವಿಲ್ಲ ಅನ್ನುವ ೨೧ ನೇ ಯಾ ಶತಮಾನವು ಆಗಾಗ ಹೆಣ್ಣಿನ ಮೇಲೆ ಕ್ರೂರತೆಯನ್ನ ಮೆರೆಯುತ್ತಿದೆ. 

ಕಣ್ಣುಗಳಲ್ಲಿ ತೀಕ್ಷ್ಣತೆ , ಚುರುಕಾದ ಬುದ್ದಿ, ಎಳ್ಳು ಹುರಿದಂತೆ ಮಾತು. ಕಾಲೇಜಿನಲ್ಲಿ ಎಲ್ಲದರಲ್ಲೂ ಮುಂದೆ . ಓದುವುದರಲ್ಲೂ , ಬರಿಯುವುದರಲ್ಲೂ , ಆಡುವುದರಲ್ಲೂ ಹಾಗೆ ಗೆಳೆತನ ಮಾಡುವುದರಲ್ಲೂ . ಅಪ್ಪ ಅಮ್ಮನಿಗೆ ಮುದ್ದಾದ ಮಗಳು . ಬಹಳ ವರ್ಷಗಳ ಪೂಜಾ  ಫಲ . ಬೆಂಗಳೂರಿನ ಗ್ರಾಮ ದೇವತೆ ಅನ್ನಮ್ಮನಿಗೆ ಸೇವೆ ಸಲ್ಲಿಸಿ ಪಡೆದಂತ ಮಗುವಿಗೆ ಅನ್ನಮ್ಮನೇ ಎಂದು ಹೆಸರಿಟ್ಟು , ಪ್ರೀತಿಯಿಂದ ಅನ್ನು ಎಂದು ಕರೆಯುತ್ತಿದ್ದರು. ಅಪ್ಪ ಚಿಕ್ಕ ಪೇಟೆಯಲ್ಲಿ ಅರಿವೇ ವ್ಯಾಪಾರೀ , ಅಮ್ಮ ಮನೆಯಜಮಾನಿ. ಯಾವ ನೋವುವಿಲ್ಲದೆ ಬೆಳೆಸಿದ್ದರು ಮನೆಯವರು .

ಯವ್ವನ ಕಾಲಿಡುತ್ತಿದ್ದಂತೆ ಅಂದವಾಗಿ ಬೆಳೆದಳು ಅನ್ನು .ಬೀಗು ಬಿನ್ನಾಣವಿಲ್ಲದೆ ಎಲ್ಲರ ಜ್ಯೋತೆ ಬೆರೆಯುತ್ತಿದ್ದಳು. ಹುಡುಗಿಯರಷ್ಟೇ ಅಲ್ಲ , ಅವಳಿಗೆ ತುಂಬಾ ಹುಡುಗರು ಗೆಳೆಯರಾಗಿದ್ದರು . 

ಕನ್ನಡ ರಾಜ್ಯೋತ್ಸವ ಬಂದರೆ ಸಾಕು , ಕಲಾವಿದರಿಗೆ ಮನೆಯ ಊಟ ಮಾಡುವುದಕ್ಕೂ ಸಮಯವಿರಲ್ಲ . ಐದಾರು ತಿಂಗಳು ಬಿಡದೆ ನಡೆಯುವ ಕಾರ್ಯಕ್ರಮಗಳು . ಅನ್ನುವಿನ ಗೆಳೆಯ ರಾಜೇಶನು ಬಳಿ ಪೇಟೆಯ ವಾಸಿ.ಅಪ್ಪ ಬಹಳ ವರ್ಷಗಳಿಂದ ಆರ್ಕೆಸ್ಟ್ರ ನಡೆಸಿಕೊಂಡು ಬರುದ್ದಿದ್ದರು. ಸಹಜವಾಗಿ ಮಗನಿಗೆ ಹಾಡುವುದು ಕರಗತವಾಗಿತ್ತು. ರಾಜೇಶನಿಗೆ ಓದುವುದರಲ್ಲಿ ಆಸಕ್ತಿ ಅಷ್ಟಕ್ಕೇ ಇತ್ತು . ಎಕ್ಸಾಮ್ ಬರೆದನಂತರ ಅವನು ಯಾವಹೊತ್ತು  ಫಲಿಂತಾಶಕ್ಕೆ ದಾರಿ ಕಾದವನೇ ಅಲ್ಲ . 

ಅನ್ನು ಎಲ್ಲವನ್ನು ತಿಳಿದುಕೊಳ್ಳುವ ಬಯಕೆ . ಸಮಯ ಸಿಕ್ಕಾಗಲೆಲ್ಲ ರಾಜೇಶ್ ಹಾಡುವುದನ್ನು ಕೇಳುತ್ತಿದ್ದಳು . ಅನ್ನುವಿಗೆ, ರಾಜೇಶ್ ಒಬ್ಬ ಆತ್ಮೀಯ ಗೆಳೆಯ . ಕಾಲೇಜಿನಲ್ಲೂ ಸಹ , ಅವಕಾಶ ಸಿಕ್ಕಾಗ ಇಬ್ಬರು ಸೇರಿ ಕನ್ನಡದ ಯುಗಳ ಗೀತೆಗಳನ್ನ ಹಾಡಿ ಸಭಿಕರನ್ನ ರಂಜಿಸುತ್ತಿದ್ದರು. 

ಅನ್ನುವಿಗೆ, ಗೆಳತಿಯರಲ್ಲಿ ಜೀವದ ಗೆಳತಿಯೆಂದರೆ ರಶ್ಮಿ . ಕಾಲೇಜಿನಲ್ಲಿ ಇವರನ್ನ ಕಂಡರೆ ಅವಳಿ -ಜವಳಿ ಅನ್ನುತ ಸಹಪಾಠಿಗಳು ರೇಗಿಸುವುದುಂಟು. ಇಬ್ಬರಲ್ಲಿ ಅಷ್ಟೊಂದು ಆತ್ಮೀಯತೆ -ಅನ್ನೋನ್ಯತೆ. ಸಹಜವಾಗಿ ಇಬ್ಬರು ಒಂದೇ ಓಣಿಯವರಾದುದರಿಂದ ಸ್ನೇಹ ಸಲುಗೆ ಸಾಮಾನ್ಯವಾಗಿತ್ತು. 

ರಾತ್ರಿ ತುಂಬಾ ಮಳೆಸುರಿದುದರಿಂದ , ಬೆಳಗ್ಗೆ ಚುಮು -ಚುಮು ಚಳಿ . ಬೆಂಗಳೂರಿನ ಟ್ರಾಫಿಕ್ನಿಂದ ತಪ್ಪಿಸಿಕೊಂಡು ನಂದಿ ಬೆಟ್ಟ ಸುತ್ತಿದರೆ ಏನು ಸೊಗಸು ಅನ್ನುತ್ತಲೇ ರವಿವಾರ ಬೆಳೆಗ್ಗೆನೆ ತನ್ನ ಸ್ನೇಹಿತರಿಗೆ ಅನ್ನು ಕರೆಮಾಡಿ, ಎಲ್ಲರನ್ನು ಒಪ್ಪಿಸಿದಳು . ಎಲ್ಲರೂ ತಮ್ಮ ತಮ್ಮ ಸ್ಕೂಟರ್ರು , ಬೈಕ್ಗಳನ್ನ ತೆಗೆದುಕೊಂಡು  ಬಳ್ಳಾರಿ ದಾರಿ ಹಿಡಿದರು .

ಬೆಟ್ಟ ಹತ್ತೂದ್ದಿದಂತೆ ಯುವಕ ಯುವತಿಯರಲ್ಲಿ ರೋಮಾಂಚನ . ಆ ಮುದ ನೀಡುವ ಚಳಿ , ಹಾಗೆ ನೋಡು ನೋಡುತ್ತಿದ್ದಂತೆ ಎಲ್ಲರನ್ನು ಕಾಣದಂತೆ ಮಾಡುವ ಮುಸುಕು ಮುಚ್ಚುವ ಮಂಜು . ರಾಜೇಶ್ ಹಾಗು ಅನ್ನು ಕೈ ಕೈ ಹಿಡಿದುಕೊಂಡು ಓಡಾಡಿದ್ದುದ್ದನ್ನ ರಶ್ಮಿ ನೋಡಿ ನೋಡದವರ ತರಹ ವರ್ತಿಸುತ್ತಿದ್ದಳು. 

ಆ ದಿನ ರಾತ್ರಿ, ರಶ್ಮಿ ಮನೆಗೆ ಬಂದು ಊಟಮಾಡಿ ಮಲಗಲು ಹಾಸಿಗೆಯ ಮೇಲೆ ಹೊರಳಿದಳು . ಏನು ಆಲೋಚಿಸುತ ಮೊಬೈಲ್ ತೆಗೆದು ಅಂದಿನ ನಂಧಿ ಬೆಟ್ಟದ ಫೋಟೋಗಳನ್ನ ನೋಡಲಾರಂಭಿಸಿದಳು . ಅಷ್ಟೊಂದು ಫೋಟೋಗಳ ಮದ್ಯ , ಅನ್ನು ರಾಜೇಶ್ ಒಟ್ಟೊಟ್ಟಿಗೆ ಇದ್ದುದು ಎದ್ದು ಕಾಣುತ್ತಿತ್ತು . ಮನದೊಳಗೆ ಏನೋ ವಿಚಾರಿಸುತ್ತಾ ನಿದ್ದೆಗೆ ಜಾರಿದಳು.

ರಾಜೇಶ್ ಅನ್ನುವನ್ನ ಇಷ್ಟ ಪಟ್ಟಿದುದನ್ನ ಹಲವು ಭಾರಿ ವ್ಯಕ್ತ ಪಡಿಸಿದ್ದ . ಆದರೆ ಅನ್ನು ಅದನ್ನ ಜಾಣತನದಿಂದ ನಿರಾಕರಿಸುತ್ತ ಬಂದ್ದಿದ್ದಳು.

ಅದೊಂದು ದಿನ ಎಕ್ಸಾಮ್ ಫಲಿಂತಾಂಶವಿದೆಯೆಂದು ಅವಸರ ಅವಸರವಾಗಿ ಕಾಲೇಜಿಗೆ ಹೋದಳು . ಇನ್ನೇನು ಕಾಲೇಜು ಹತ್ತಿರ ಬರುತ್ತಿದ್ದಂತೆಯೇ ಇಬ್ಬರು ಮುಸುಕುಧಾರಿಗಳು ಬೈಕ್ ಮೇಲೆ ಬಂದು ಏನೋ ಹೇಳಿದಂತೆ ಮಾಡಿ, ಅವಳ ಮುಖಕ್ಕೆ ಆಸಿಡ್ ಎರೆಚಿ ಪರಾರಿಯಾದರು. ಅನ್ನು ಗಾಡಿಯ ನಂಬರ್ ಪ್ಲೇಟ್ ನೋಡಿ ರ್ರ... ರ್ರ..ರ್ರ  ಅನ್ನುತ ಮಾತೆ ಬರದೇ ನೋವಿನಿಂದ ನರಳುತ್ತ ಕುಸಿದು ಬಿದ್ದಳು . ಅದೇ ದಾರಿಯಲ್ಲಿ ಸಾಗುತ್ತಿದ್ದ ಅವಳ ಗೆಳತೀ ರಶ್ಮಿ ಮನೆಯವರಿಗೆ ಕರೆ ಮಾಡಿ , ಹಾಸ್ಪಿಟಲಿಗೆ ಸೇರಿಸದಳು . ಅವಳ ಅಂದವಾದ ಮುಖ ಸುಟ್ಟು ವಿಕಾರವಾಗಿತ್ತು.

ಸಿಸಿಟಿವ್ ಫೂಟೇಜ್ ತೆಗೆದು ನೋಡಿದಾಗ , ಪೊಲೀಸರಿಗೆ ಅಚ್ಚರಿ ಕಾದಿತ್ತು . ಸುಳಿವು ಸಿಕ್ಕಮೇಲೆ ಪೊಲೀಸರು ನಗರದ ಗಾಂಧಿ ಬಜಾರ್ಗೆ ಬಂದು ಆರೋಪಿಯನ್ನ ಹುಡುಕಲಾರಂಭಿಸಲಿದರು. ಅಣ್ಣಮ್ಮನ ಜಾತ್ರೆಯಲ್ಲಿ ಸೇರಿದ್ದ ಜನರನ್ನ ಸರಿಸುತ್ತ ಒಳಗಡೆ ನುಗ್ಗಿದರು . ಜೋರಾಗಿ ಹಾಡುತ್ತಿದ್ದ ಆರ್ಕೆಸ್ಟ್ರ ದಿಂದ ರಾಜೇಶನನ್ನ ಕೈ ಕಾಲು ಕಟ್ಟಿ ದಬ್ಬಾಳಿಕೆಯಿಂದ ಪೊಲೀಸ ಕಚೇರಿಗೆ ಒಯ್ದು ಸರಿಯಾಗಿ ಬಿಟ್ಟರು . ಅವನಿಗೆ ಮಾತಾಡಲು ಅವಕಾಶ ಕೊಡದೆ ಹಿಂಸಿಸಿದರು . ಅವನ ಚೀರಾಟಕ್ಕೆ ಧ್ವನಿ ಬಿದ್ದೆ ಹೋಯ್ತು . 

ಅವಳ ಮನೆಯವರಿಗಂತೂ ದಿಕ್ಕು ತೋಚದಾಗಿತ್ತು . ಬೀದಿಯಲ್ಲಿ ಹೆಣವಾಗಿ ಬೀಳಬಹುದಿತ್ತ ಅನ್ನುವನ್ನ ರಕ್ಷಿಸಿದಕ್ಕೆ, ರಶ್ಮಿಗೆ  ಮನೆಯವರು  ಋಣಿಯಾಗಿದ್ದರು. ಆದರೆ ಅನ್ನುವಿಗೆ ಅವಳ ಹೆಸರನ್ನ ಕೇಳಿದರೆ ಸಾಕು, ದೇಹದಲ್ಲಿ ಬದಲಾವಣೆ ಕಾಣುತ್ತಿತ್ತು . ಮನೆಯವರಿಗಂತೂ ಅದನ್ನ ನೋಡಿ " ಏನು ಗೆಳೆತನ !? ರಷ್ಮಿಯನ್ನ ಕಂಡರೆ ಅನ್ನುವಿಗೆ ಏನೋ ಹೇಳುವಾಸೆ !. ಆದರೆ ಏನು ಮಾಡುವುದು ? ಅದನ್ನ ವ್ಯಕ್ತ ಪಡಿಸಲಿಕ್ಕೆ ಅವಳಿಂದಾಗದು !" ಹೇಳಿ ನಿಟ್ಟಿಸುರು ಬಿಡುತ್ತಿದ್ದರು.

ಒಂದು ದಿನ ಕಾಲೇಜಿನ ಪ್ರಾಂಶುಪಾಲರು ಕರೆ ಮಾಡಿ , ಅನ್ನು ಫಸ್ಟ್ ರಾಂಕ್ ಬಂದಿದ್ದನ್ನ ತಿಳಿಸಿದರು . ಅನ್ನು ಸದಾ ಲವಲವಿಕೆಯಿಂದ ಓಡಾಡುತ್ತಿದ್ದವಳು. ಯೀಗ ಕತ್ತಲೆ ಕೊನೆಯಲ್ಲಿ ಅಂಧಕಾರವನ್ನು ಒಪ್ಪೊಕೊಂಡಿದ್ದಾಳೆ . ಅವಳಿಗೀಗ ಏನು ಕೇಳಿಸದು , ಕಾಣಿಸದು . ಆಸಿಡ್ ಅವಳೆಲ್ಲ ಸೌಭಾಗ್ಯಗಳನ್ನ ಸುಟ್ಟುಹಾಕಿತ್ತು.

ಅಕ್ಕ , ಚನ್ನ ಮಲ್ಲಿಕಾರ್ಜುನನ ಹುಡುಕುತ್ತ ಪರ್ವತೇವೇರಿ , ಕದಳಿ ವನದಲ್ಲಿ ಕಾಲ ಕಳೆದಳು. ಅನ್ನು ಯಾರನ್ನ ನೆನೆದು ಮುಕ್ತಿಹೊಂದುವಳು ?!.


Saturday 24 December 2022

ಎದೆಯ ಕೂದಲುಗಳ ಮೇಲೆ ಚೇಳುಗಳು

ಸುಮಾರು  ೧೫೦ ವರ್ಷಗಳ ಹಿಂದಿನ ಘಟನೆ .ಊರಲ್ಲಿ ಒಬ್ಬ ಹಿರಿಯರು ತನಗೆ ಎದೆನೋವು  ಇದೆ ಎಂದು ತಮ್ಮ ಆಪ್ತ ಬಳಗದಲ್ಲಿ  ಹೇಳಿಕೊಂಡು ಓಡಾಡುತ್ತಿದ್ದರಂತೆ .


ಆ ಕಾಲದಲ್ಲಿ ವೈದ್ಯರು  ಹಳ್ಳಿಗಳಲ್ಲಿ ಎಲ್ಲೂ ಕಾಣಸಿಗದ ದೇವರುಗಳು.


ಹಿರಿಯರ ಎದೆ ನೋವು ಊರಲ್ಲಿ ಒಂದು ಬಿಡಿಸಲಾರದ ಒಗಟಿನಂತಾಗಿತ್ತು .


ಹಗಲು ರಾತ್ರಿ ದುಡಿಯುವ  ಬಿರುಸಿನ ಆಳು ಒಂದೊಂದು ಸಾರಿ ನೋವು  ಎಂದಕೂಡಲೇ  ಬಹಳ ಮಂದಿಗೆ ನಂಬಲಾರದ ಅಳಲು ಆಗಿತ್ತು !.


ನಾಟಿ  ವೈದ್ಯರಾದರು !


ದೇವರು ದಿಂಡಿರು  ಆಯ್ತು !


ಮಾಟ ಮಂತ್ರವಾಯಿತು  ! 


ಆ  ಎಂಟೆದೆ  ಬಂಟನ  ಎದೆ ನೋವು ಮಾತ್ರ ಅವಾಗ್ ಅವಾಗ್ ಬಂದು  ಹೋಗುದು ತಪ್ಪಲಿಲ್ಲ  . 


ಹಿರಯರ ಬದುಕುವ ಬಗೇನೇ  ರೋಚಕ . ಒಂದು ದಿನ ಹಿರಿಯರು  ಹಳ್ಳದ ಪಕ್ಕದಲ್ಲಿ  ಮಲಗಿದ್ದರಂತೆ . ರಾತ್ರಿ  ಹೊತ್ತು  ಸುರಿದ  ಮಳೆಗೆ  ಹಾಸಿಗೆ ಸಮೇತ  ಹಳ್ಳದಲ್ಲಿ 

ಕೊಚ್ಚಿಕೊಂಡು ದೂರದ ಜಾಗದಲ್ಲಿ  ಹಾಸಿಗೆ ಸುತ್ತಿಕೊಂಡು ಬಿದ್ದಿದ್ದರಂತೆ .ಅವರನ್ನ  ಗುರುತಿಸಿ  ಆಪ್ತರು , ಸ್ನೇಹಿತರು ಗೋಳೊವೆಂದು  ಅಳುತ್ತ  ಆಕಡೆ ಯಿಕಡೆ ತಳ್ಳಿ ನಮ್ಮನ್ನ  ಬಿಟ್ಟು ಹೋದನೆಂದು  ಕಿರುಚಿದರಂತೆ .ಅವರ ತಳ್ಳಾಟಕ್ಕೆ  ಎಚ್ಚೆತ್ತು  " ಯೇ  ನಿಮ್ಮೌನ  ನಾ ಸತ್ತಿಲ್ಲರೋ " ಅಂದ್ರಂತೆ . 


ಕೊಚ್ಚಿಕೊಂಡು ಹೋದ್ರು ನಿದ್ರಾದೇವತೆ ಬಿಡಲಿಲ್ಲ   ನಮ್ಮ  ಹಿರಿಯರನ್ನ .


ಒಂದು ದಿನ ಊರಲ್ಲಿನ  ನಿಪುಣರು ಒಂದೆಡೆ  ಸೇರಿ ಹಿರಿಯರ  ಎದೆ  ನೋವಿನ ಮೂಲ ಹುಡುಕಲು ಸಿದ್ದರಾದರಂತೆ . ಅವರಲ್ಲಿ 

ಒಬ್ಬರು " ಹಿರಿಯರೇ ಅಂಗಿಯನ್ನ  ಬಿಚ್ಚಿ "

ದುರುಗುಡಸಿ ಎದೆಯನ್ನ  ನೋಡುತ್ತಾ ಹೇಳಿದರು  .


ಅಂಗಿಯನ್ನ  ಬಿಸಾಡುತ್ತಿದ್ದಂತೆ ನೆರೆದವರಿಗೆ  

ಒಂದು ಕಾಡು ನೋಡಿದಷ್ಟು  ಎದೆಯಮೇಲೆ ದಟ್ಟವಾದ ಅಡ್ಡ  ದಿಡ್ಡಿಯಾಗಿ ಕೂದಲು ಬೆಳೆದು ಹೊರಳಿತ್ತು .


ಕಾವು ಕೊಟ್ಟು ಎದೆಯನ್ನ  ಬಿಸಿ ಮಾಡಿದರೆ ಸ್ವಲ್ಪ ಸಮಾಧಾನ ಸಿಕ್ಕರೂ ಸಿಗಬಹುದು ಅನ್ನುತ ಲೆಕ್ಕಾಚಾರ ಹಾಕಿ ನಿಂತವರಲೊಬ್ಬರು ಮುಂದಾದರು .


ಕಾವೂ ಕೊಟ್ಟ ಕ್ಷಣ ಮಾತ್ರದಲ್ಲಿ ಕೂದಲುಗಳಲ್ಲಿ  ಮನೆಮಾಡಿಕೊಂಡಿರುವ ಚೇಳುಗಳು ಬುದು - ಬುದು ಹೊರಗಡೆ ಬಂದವು .


ಯಾವ ರೋಗುನು ಇಲ್ಲ ಕಾಯಿಲೇನು ಇಲ್ಲ . ಚೇಳುಗಳ ಕಡಿತಕ್ಕೆ ನೋವು ಬಂದಿದೆ ಅನ್ನುವ ಸಂಗತಿ ತಿಳಿದು ನೆರೆದವರು ಹೌ ಹಾರಿದರು . 


ಎದೆಯ ಮೇಲೆ ಜಿಡ್ಡುಗಟ್ಟಿದ ಕೂದಲುಗಳನ್ನೇ ಮನೆಮಾಡಿ ಆವಾಗ್ ಇವಾಗ್ ಕಚ್ಚುತಾ  ಹಿರಿಯರನ್ನ ಗೋಳಿಟ್ಟ ಚೇಳುಗಳಿಗೆ ಚಪ್ಪಲಿನ ಏಟು  ಕೊಡಲಾಯಿತು . 


ಹಿರಿಯರು ಅಂದ್ರು ಅಂದಿರಬಹುದು 

  "ಉಂಡ ಮನೆಗೆ ಕಣ್ಣು ಹಾಕಿದ ಚೇಳುಗಳೇ !!??"

Tuesday 28 June 2022

ಶಾಸನ(Kannada inscription , Rameshwara Temple --Ramatheertha, Athani, Karnataka)

 



1. 0 ಸ್ವಸ್ತಿ ಶ್ರೀ ಸಕವರಿಸಂ ೧೨೮೨ನೆಯ ಸಾರ್ವರಿ ಸಂವತ್ಸರ
2. ದ ವಯಿಸಾಖ ಸು ೧೫ ಮಂಗಳವಾರದಲು || ಶ್ರೀ ಮತು
3. ಮುದುನೂರಾ ಮೂಲ ಸ್ಥಾನಿಕ . ದೇವರ | ಪುನ ಪ್ರತಿಷ್ಟೆ| ಜೀರ್ನ್ನೋ
4. ದ್ಧಾರ| ದೇವರ ಗ . . ಬಾವಿ ಜೀರ್ನ್ನೋದ್ಧಾರವಂ ಮಾ
5. ಡಿ ವಿಸ್ವನಾಥನೆಂಬ ಜಂಗಮ ಮಾಡಿಸಿದರು| ಮಂಗ
6. ಳ ಮಹಾಶ್ರೀ| ಎರಡನೆಯ ಜೀರ್ನೋದ್ಧಾರ ಸಕವರಿಸಂ
7. ೧೨೮೬ನೆಯ ಸೂಬಕ್ರಿತು ಸಂವತ್ಸರದ ಪಾಲ್ಗುಣ ಬ ೫ ಸುಕ್ರ
8. ವಾರದಲು ಶ್ರೀಮತು . . ಮಱಿ ತೀರ್ಥ್ಥದ ರಾಮನಾಥ ದೇ
9. ವರ ಪುನ ಪ್ರತಿಷ್ಟೆ| ಸಿವಾಲ್ಯದ ಜೀರ್ನ್ನೋದ್ಧಾರವ ಮಾಡಿದರು|
10. ವಿಸ್ವನಾಥನೆಂಬ ಜಂಗಮ ಮಾಡಿಸಿದರು ಮಂಗಳ ಮ
11. ಹ ಶ್ರೀ ಶ್ರೀ ಶ್ರೀ ಶ್ರೀ ಶ್ರೀ
ಈ ಶಾಸನವು ಸಾ.ಶ 1360 ಹಾಗೂ 1363ರಲ್ಲಿ ವಿಶ್ವನಾಥ ಎಂಬ ಜಂಗಮರು ರಾಮನಾಥ ದೇವರ ಪುನಃ ಪ್ರತಿಷ್ಟೆ, ಎರಡು ಬಾರಿ ಜೀರ್ಣೋದ್ಧಾರ ಹಾಗೂ ಬಾವಿಯನ್ನು ಜೀರ್ಣೋದ್ಧಾರ ಮಾಡಿರುವ ಮಾಹಿತಿ ನೀಡುತ್ತದೆ

Saturday 25 June 2022

ನೀ ನಾ


ನೀ ನಾ 

-----------------------------------------------

ನೀ ತೋರುವ ಪ್ರೀತಿಗೆ ನಾ ಬೇಡ  ಅನ್ನೇನ

ಅಮಾಸಿ ದಿನ ದುರಡಿ ಹೋಳಿಗೆ , ಬೊಗಾಣಿ ಅನ್ನ ಆ೦ಬ್ರ ಕಾಲಿಮಾಡಲಿಲ್ಲೆನ 


ನೀ ಮಾಡುವ ಮಾಯಕ ಮೈ ಮರೀಲಿಲ್ಲೇನ

ಕೊಬ್ಬರಿ ಎಣ್ಣೀ ಹಚ್ಚಿಸಿಕೊಂಡ ಎರಕೊಳ್ಳಲ್ಲಿಲ್ಲೆನ


ನೀ ಮಾಡುವ ಚೇಷ್ಟೆಗೆ ನಾ ಚಡಪಡಿಸಿದಿನೇನ 

ಇಬ್ಬರು ಕುಡಿ ಹೊಟ್ಟೆ ಹುಣ್ಣಾಗುವಂಗ ನಗಲ್ಲಿನೆನ


ನೀ ಬಂಗಾರ ಒಡವೆ ನೋಡಿ ಕೊರಳಕ್ಕ ಸೊಂಟಕ್ಕ ಕೈಯಾಡಸಿಲ್ಲಿಲ್ಲೆನ 

ಮರುದಿನ ಟಿಕ್ಕಿ ಸರ ಬೋರಮಾಳ ಡಾಬಾ ತರಲ್ಲಿಲ್ಲೆನ


ನೀ ಪಂಚಮಿಗೆ ಉಂಡಿ ಮಾಡಿ ದನಿಲ್ಲಿಲ್ಲೆನ 

ಕಡೆ ಪಾಟಿನ ಮನೆಗೆ ಜೋಕಾಲಿ ಕಟ್ಟಿ ತೂಗಲ್ಲಿಲ್ಲೆನ


ನೀ ತವರ್ಮನೆ ನೆನಸಿಕೊಳ್ಳಲ್ಲಿಲ್ಲೆನ 

ನಿನ್ನ ಹಡದವರು ಬಳುವಳಿಯಾಗಿ ಕೊಟ್ಟ ಆಕಳನ್ನ ಬ್ಯಾಡನ್ನೆನ 


ನೀ ಎದೇಮ್ಮಿನ ಹಿಂಡಲ್ಲಿಲ್ಲೆನ 

ಗಿಪ್ಪದಹಾಲಿನ ವಡಿ ಮಾಡಿಕೊಡಲಿಲ್ಲೇನ 


ನೀ ನಾ ಅಂದ ಜಗಳ ಮಾಡಲಿಲ್ಲೆನ  

ರಾತ್ರಿ ಹೊತ್ತು ಒಂದಾಗಲ್ಲಿಲ್ಲೆನ


                     --ಪ್ರಶಾಂತ್ ಸವದಿ



Thursday 5 May 2022

ನಮ್ಮ ಕೆಂಪು ನಾಯಿ

 ನಮ್ಮ ಕೆಂಪು ನಾಯಿ

-----------------------------------

ರೊಟ್ಟಿ ,ನುಚ್ಚು , ಕಾಯಿ ಪಲ್ಲೆ , ಕುಟ್ಟಿದ ಮೆಣಸಿನ ಕಾಯಿ ,ಮೊಸರು ಹಾಗು ಮಜ್ಜಿಗೆ ಹೀಗೆ ಆ ದಿನದ ಅಡಿಗೆಯನ್ನ ಒಂದು ದೊಡ್ಡದಾದ ಬುಟ್ಟಿಯಲ್ಲಿ ಜೋಡಿಸಿಕೊಂಡು ಅವ್ವ ಮೆನೆಯ ಕೆಲಸ ಮುಗಿಯಿಸಿ , ಸೂರ್ಯ ನೆತ್ತಿಯ ಮೇಲೆ ಬರುವಷ್ಟರಲ್ಲೇ ತೋಟದ ಕೆಲಸಕ್ಕೆ ತಯ್ಯಾರಾಗುತ್ತಿದ್ದರು. ಅದನ್ನೆಲ್ಲಾ ಮನೆಯ ನುಚ್ಚಿನಕಿಯ ಮೇಲೆ ಕೂತು ಗಮನಿಸುತ್ತಾ ಕೂತಿರುತ್ತಿದ್ದೆ .

ರೊಟ್ಟಿಯ ಬುಟ್ಟಿ ಹುಲ್ಲಿ ಕಟ್ಟಿಗೆಯಿಂದ ಮಾಡಲ್ಪಟ್ಟಿರುತ್ತಿತ್ತು . ಅದರ ಜುಪಾದ ಎಲೆಗಳನ್ನ ಸವರಿ ಬಿಸಿಲಿಗೆ ಒನ ಹಾಕುತ್ತಿದ್ದರು. ಸರಿಯಾಗಿ ಒಣಗಿದ ಮೇಲೆ ಗರಿಗಳನ್ನ ಹೆಣೆದು ಬುಟ್ಟಿಮಾಡುತ್ತಿದ್ದರು . ಇದನ್ನೇ ಒಂದು ಕುಲ ಕಸಬು ಮಾಡಿಕೊಡಿದ್ದ ಕುಶಲ ಕರ್ಮಿಗಳು ಊರಲ್ಲಿಯಿದ್ದರು. ಅವ್ವ ಬುಟ್ಟಿಯ ಸುತ್ತಲೂ ಗೋವಿನ ಸೆಗಣಿಯಿಂದ ಸಾರಿಸಿ ಅದಕ್ಕೆ ಅಂದ ಚೆಂದವನ್ನ ಕೊಟ್ಟಿದ್ದರು.

 ಅವ್ವ ಹೊರಡಲು ಇನ್ನೇನು ಮನೆಯ ಹೊಸ್ತಿಲವನ್ನು ದಾಟುತ್ತಿದ್ದಂತೆ ,ನಾನು ಕೆಳಗೆ ಇಳಿದು ಅವರ ಬೆನ್ನು ಹತ್ತುತ್ತಿದ್ದೆ .


ಮ್ಯಾಲಕಿನ ತೋಟ ಊರಿಂದ ಸುಮಾರು ೨ ಕಿಲೋಮೀಟರು ದೂರ ;ಮನೆಯಿಂದ ಅನಾಯಸವಾಗಿ ನಡಿದೆ ಹೋಗುವ ದಾರಿ . ತೋಟವು ಊರಿನ ಮನೆಯ ಹಿಂದೆ ಅಂದರೆ ಸೂರ್ಯಾಸ್ತ್ರವಾಗುವ ಕಡೆಗೆ ಇರುವುದರಿಂದ ಮನೆಯವರು ಅದನ್ನ ಮ್ಯಾಲಕಿನಾ ತೋಟವೆಂದು ಹೇಳುತ್ತಿದ್ದರು. ತೋಟದ ಮನೆಯಿಂದ ಒಬ್ಬ ಅಥಿತಿ ,ನಾವು ಇನ್ನು ಅರ್ಧ ಕಿಲೋಮೀಟರು ದೂರ ಇರುವಾಗಲೇ ನಮ್ಮಣ್ಣ ನೋಡಲು ಓಡಿ ಬಂದಿರುತ್ತಿದ್ದ . ಅದು ನಾವು ಆಗಮಿಸುತ್ತಿರುವುದು ಅವನಿಗೆ ಹೇಗೆ ಗೊತ್ತಾಗುತ್ತಿತ್ತೋ ?. ದೇವರೇ ಬಲ್ಲ! . ಬಾಲಲ್ಲಾಡಿಸುತ ಸುಮ್ಮನೆ ನಿಲ್ಲೋ ಪ್ರಾಣಿಯಲ್ಲ ಅದು . ಅವ್ವ ಹೊತ್ತಿರುವ ರೊಟ್ಟಿಯ ಬುಟ್ಟಿ ಮುಟ್ಟುವತನಕ ಜಿಗಿಯುತ್ತಿದ್ದ . ನೋಡಲು ಕೆಂಪು ಕೆಂಪಾಗಿ ಕಂಡು ಬರುತ್ತಿದ್ದರಿಂದ ಅವನನ್ನ ಕೆಂಪು ನಾಯಿ ಎಂದೇ ಮನೆಮಂದಿ ಕರೆಯುತ್ತಿದ್ದರು. ಕೆಣಕಿದರೆ ತೋಳವೇ ಸರಿ !.

ಅಪ್ಪಿ ತಪ್ಪಿ ಯಾರಾದ್ರೂ ಹಚ್ಯಾ ಎಂದು ಕಲ್ಲೆಸೆದ್ರು..!? ,ಮುಗಿತು ಕಥೆ ! . ಎಸೆದ ಕಲ್ಲನ್ನ ಹುಡುಕಿ ತನ್ನ ಚೂಪಾದ ಹಲ್ಲುಗಳಲ್ಲಿ  ಹಿಡಿದು ತನ್ನ ಆಕ್ರೋಶವನ್ನ ಹೊರಹಾಕುತ್ತಿತ್ತು . ಮೆನೆಯವರೇ ಆದರು ಸರಿ ಎಸೆದ ಕಲ್ಲನ್ನ ಹುಡುಕಿ ಗುರ್ ಅನ್ನುತ್ತಲೇ ಕಚ್ಚಿ ಹಿಡಿಯುತ್ತಿತ್ತು . ಇದು ಅದರ ಒಂದು ವಿಶಿಷ್ಟ ಸ್ವಭಾವವಾಗಿತ್ತು .ನಮ್ಮ ತೋಟದ ಮನೆಯ ದನದ ಕೊಟ್ಟಿಗೆ ಹಾಗು ಸುತ್ತ-ಮುತ್ತ ಇರೋ ಹೊಲವನ್ನ ರಕ್ಷಣೆ ಮಾಡೋ ಕೆಲಸ ತನ್ನಮೇಲೆ ಸ್ವಯಂಘೋಷಿತವಾಗಿ ಹೆರುಕೊಂಡಿದ್ದ ಜೀವ ಅದು . ಹೀಗಾಗಿ ತೋಟದ ಮನೆಗೆ ಯಾರೇ ಬಂದ್ರು ಮೊದಲು ಅವನನ್ನ ಹಿಡಿದು ಒಂದು ಕಡೆ ಕಟ್ಟಿ ಆಮೇಲೆ ಬಂದವರನ್ನ ಬರಮಾಡಿಕೊಳ್ಳ ಬೇಕಿತ್ತು .


ಮ್ಯಾಲಕಿನ ತೋಟದಲ್ಲಿ ಹೆಚ್ಚಾಗಿ ಬೆಳಿಯುತ್ತಿದ್ದು ಅರಿಸಿನ . ಇದು ನಮ್ಮ ಭಾಗದ ಒಂದು ಪ್ರಮುಖ ಬೆಳೆ. ಪ್ರತಿ ವರ್ಷ ಮಾರ್ಚ್ ಇಲ್ಲ ಏಪ್ರಿಲ್ನಲ್ಲಿ ಕಟಾವು ಮಾಡಿ , ಮನ್ನಿನ್ನಲ್ಲಿ ಹುದುಗಿರುವ ಬಂಗಾರವನ್ನ ಹೊರ ತೆಗೆಯಬೇಕಿತ್ತು . ಅರಿಶಿನವು ರೈತರ ಬಾಳಿಗೆ ಬಂಗಾರಕ್ಕಿಂತಲೂ ಹೆಚ್ಚು ಅನ್ನುವ ಕಾಲ ಅದು . ಅರಿಸನವನ್ನ ಮಣ್ಣಿಂದ ತೆಗೆಯುವುದು , ಕೋಲಾರದ ಘಣಿಯಿಂದ ಚಿನ್ನ ತೆಗೆಯುವ ಕೆಲಸಕ್ಕೆ ಸಮ ಅನ್ನುವಷ್ಟರಮಟ್ಟಿಗೆ ಕಷ್ಟದಾಯಕವಾಗಿತ್ತು!. ಅರಿಶಿನವು ವಾರ್ಷಿಕ ಬೆಳೆಯಾದುದರಿಂದ ತುಂಬಾ ಶ್ರಮದಾಯಕ ಹಾಗು ಮಿತಿಮೀರಿದ ಕೆಲಸವಾಗಿತ್ತು . ಒಂದು ಬದಿಯ ಎರಡು ಕಡೆ ಅರಿಶಿನವು ಆಳವಾಗಿ ಇಳಿದಿರುತ್ತಿತ್ತು . ಇತರಹ ಸಾವಿರಾರು ಬದಿಗಳು ಮುನ್ನೂರೋ ಇಲ್ಲ ಐನೂರೋ ಉದ್ದ ಇರೋವು . ಸಾಲನ್ನ ಹಿಡಿದು , ಎರಡು ಮುಖದ ಗುದ್ದಲಿನಿಂದ ಅಗೆದು , ಹುದುಗಿರುವ ಅರಿಶಿನ ಪೆಂಟೆಯನ್ನ ಹೊರ ತೆಗೆದು ಹಾಕೋದು ಎಂಟೆದೆಯ ಬಂಟನ ಕೆಲಸವಾಗಿತ್ತು. ಹಡ್ಡವರು(ಅಗೆಯುವವರು) ಮುಂದೆ ಹಡ್ದುತ್ತ ಹೋದಂತೆ , ಅವರನ್ನ ಹಿಂಬಾಲಿಸುತ್ತ ಅರಿಶಿನ ಪೆಂಟೆಯನ ಮುರಿದು , ಅರಿಶಿನ ಮತ್ತು ಅದರ ಬೀಜವನ್ನ ಬೇರ್ಪಡಿಸುತ್ತ ಗುಂಪು ಹಾಕೋ ಮತ್ತೊಂದಿಷ್ಟು ಆಳುಗಳು . ಅರಿಸಿನ ಚೆನ್ನಾಗಿ ಬಂದಿದ್ದರೇ , ಕೈ ಬೆರಳುಗಳಂತೆ ಕಂಡು ಭೂಮಿಯಲ್ಲಿ ಹುದುಗಿರುತ್ತಿದ್ದವು. ಅವುಗಳನ್ನ ಹನಿಗೇಗಳಂತೂ ಕರೆಯುತ್ತಿದ್ದರು .


ಹೀಗೆ ಗುಂಪಾಗಿ ಬಿದ್ದಿರೋ ಅರಿಶಿಣವನ್ನ ಚಕ್ಕಡಿಯಲ್ಲಿ ಸಾಗಿಸಿ ಅರಿಸಿನ ಒಲೆಯ ಹತ್ತಿರ ಇನ್ನೊಂದು ದೊಡ್ಡ ಗುಂಪು ಹಾಕೋದು . ಇದು ಸುಮಾರು ೧೦ ರಿಂದ ೧೫ ದಿನಗಳ ತೆಗೆದು ಕೊಳ್ಳುವ ಬಹಳ ಪರಿಶ್ರಮದ ಕೆಲಸವಾಗಿತ್ತು . ಇಲ್ಲಿಗೆ ಅರಿಶಿನವು ಸಾಂಗ್ಲಿ ಅಡತಿಗೆ ಹೋಗಿ ಬೀಳುವುದಿಲ್ಲ ; ಇನ್ನು ಬಹಳ ಕೆಲಸ ಉಳಿದಿರುತ್ತಿತ್ತು. ಹೀಗೆ ಬಿದ್ದಿರುವ ಅರಿಶಿಣವನ್ನ ದೊಡ್ಡದಾದ ಗಂಗಾಳದಲ್ಲಿ ಹಾಕಿ ನೀರಿನಲ್ಲಿಕುದಿಸಬೇಕಿತ್ತು. ಕತ್ತರಿಸಿ ಹಾಕಿದ್ದ ಅರಿಶಿನದ ತಪ್ಪಲೆ  ಊರವಲು ಆಗಿ ಉಪಯೋಗವಾಗುತ್ತಿತ್ತು .

 

ಎಷ್ಟೋ ಸಲ ಅವಸರದಲ್ಲಿ ತಪ್ಪಲನ್ನ ಒಲೆಯ ಒಳಗಡೆ ತಳ್ಳಲು ಹೋಗಿ ಜನ ಕೈ ಸುಟ್ಟುಕೊಂಡಿದ್ದು ಕೇಳಿ ಸ್ವಲ್ಪ ಜಾಗೂರುಕತೆಯಿಂದ ಕೆಲಸ ನಿರ್ವಹಿಸುತ್ತಿದ್ದರು . ಅರಿಶಿನವು ಎಷ್ಟು ಕುದ್ದರೆ ಸರಿ ಅನ್ನುವ ಲೆಕ್ಕಾಚಾರಗಳು ಗೊತ್ತಿರುವುದು ಬಹಳ ಮುಖ್ಯವಾಗಿತ್ತು . ನುರಿತ ಅನುಭವಿಯು,ಅವಾಗ ಅವಾಗ ಅರಿಶಿಣವನ್ನ ಹಿಚುಕಿ ನೋಡಿ ಗಂಗಾಳವನ್ನ ಇಳಿಸೋ ಸೂಚನೆಯನ್ನ ಬೇರೆಯರಿಗೆ ಕೊಡುತ್ತಿದ್ದ . ಹೀಗೆ ಅರಿಸಿನ ಕುದ್ದಮೇಲೆ ಅದನ್ನ ಬೇರೊಂದು ಕಡೆ ಹರಡುಬೇಕಿತ್ತು . ಅಜಮಾಸು ಒಂದು ವಾರ ಬಿಸಿಲಿಗೆ ಒಣಹಾಕಬೇಕಿತ್ತು . ಸಂಪೂರ್ಣ ಒಣಗಿದಮೇಲೆ ಅವುಗಳನ್ನ ಹೊಳಪು ಮೂಡಿಸಲು ಗಾಡದಲ್ಲಿ ಹಾಕಿ ಮೇಲೆ ಕೆಳಗೆ ಮಾಡಿ ಸುತ್ತಬೇಕಿತ್ತು . ಗಾಡವು ಒಂದು ಬ್ಯಾರೆಲ್ . ಅದರಲ್ಲಿ ರಂದ್ರಗಳನ್ನ ಮಾಡಲಾಗಿರುತ್ತಿತ್ತು . ಒಳಗಡೆ ಹರಿತವಾದ ಕಬ್ಬಿಣದ ಹಲ್ಲುಗಳು, ಗಾಡವನ್ನ ತಿರುವುತ್ತಾ ಹೋದಂತೆ ,ಒಣಗಿದ ಅರಿಶಿನಗಳು ಈ ಹಲ್ಲುಗಳಿಗೆ ಒಂದೇಸಮನೆ ತಿಕ್ಕಿ ತಿಕ್ಕಿ ಮೇಲಿನ ಪದರು ಉದುರಿ ಹೋಗಿ ಬಂಗಾರದ ಬಣ್ಣಕ್ಕೆ ತಿರುಗುತ್ತಿದ್ದವು . ಹಗಲು ರಾತ್ರಿ ಗಾಢ ತಿರುಗಿಸುವುದರಿಂದ ಅಂಗೈಯಲ್ಲಿ ಹುಣ್ಣುಗಳು ಹುಟ್ಟಿದ್ದು ಹಳದಿ ಬಣ್ಣದಿಂದ ಮರೆಯಾಗಿ ಕಂಡುಬರುತ್ತಿರಲಿಲ್ಲ.     ಅಲ್ಲಿಗೆ ಅವುಗಳ್ಳನ್ನ ಒಂದು ಮುಂಬೈ ಚಿಲಿನಲ್ಲಿ ಹಾಕಿ ಬೇರೊಂದು ಕಡೆ ಇಟ್ಟು ಮುಂದಿನ ಗಾಡಕ್ಕೆ ತಯ್ಯಾರಿ ಮಾಡಿಕೊಳ್ಳಲಾಗುತ್ತಿತ್ತು . 


ಒಂದರಮೇಲೊಂದು ಅರಿಶಿನದ ಚಿಲುಗಳನ್ನ ಮಾವಿನ ಮರದ ಕೆಳಗಡೆ ಇಡಲಾಗಿತ್ತು . ಇವೆಲ್ಲವೂ ಸಾಂಗಲಿ ಅಡತಿಗೆ ಹೋಗಲು ಒಂದು ಒಳ್ಳೆ ಧಾರನಿಗೆ ಕಾಯುತ್ತಿದ್ದವು . ಸಾಂಗಲಿಯು ನೆರೆಯ ಮಹಾರಾಷ್ಟ್ರ ರಾಜ್ಯದ ಒಂದು ತಾಲೂಕು ಪಟ್ಟಣವಸ್ಟೇ ಅಲ್ಲ , ಅದು ಸುತ್ತಮುತ್ತಲಿನ ಸುಪ್ರಸಿದ್ದ ವಾಣಿಜ್ಯ ಕೇಂದ್ರವಾಗಿತ್ತು. ತೋಟದ ಕೆಳಭಾಗಲ್ಲಿ ಒಂದು ದೊಡ್ಡದಾದ ಒಡ್ದು. ಮಳೆಗಾಲದಲ್ಲಿ ಸುರಿದ ಮಳೆ ಈ ಬದಿಯಿಂದ ಹರಿದು ಮುಂದೆ ಹಳ್ಳ ಸೇರುತ್ತಿತ್ತು . ಬದಿಯು ದೊಡ್ಡದಾಗಿದ್ದು ಫಲವತ್ತಾದ ಮಣ್ಣಿನಿಂದ ತುಂಬಿಕೊಂಡಿರುವುದರಿಂದ ಅದರ ಎಡ -ಬಲ ಗಿಡ-ಗಂಟಿಗಳಿಂದ ,ಮರಗಳಿಂದ , ಬಿದಿರು ಬೆಟ್ಟಗಳಿಂದ ದಟ್ಟವಾಗಿ ಕಂಡು ಒಂದು ಸಣ್ಣ ಅರಣ್ಯ ಕಂಡಂತೆ ಹಸಿರುನಿಂದ ಕಂಗೊಳಿಸುತ್ತಿತ್ತು. ಒಂದು ಮೂಲೆಯಲ್ಲಿ ಎರಡು ಮಾವಿನ ಮರಗಳು ೫೦ ಮೀಟರ್ ದೂರದ ಅಂತರದಲ್ಲಿ ಬೆಳೆದು ನಿಂತ್ತಿದ್ದವು . ಅವುಗಳ ಹಣ್ಣುಗಳ ರುಚಿ ಆಧಾರದ ಮೇಲೆ ಮರಗಳಿಗೆ ಹೆಸರು ಬಂದಿದೆ . ಸಕ್ಕರೆತಿಂದಷ್ಟು ಸಿಹಿಯಾಗಿರುವ ಮಾವಿನ ಮರವನ್ನ ಸಕ್ಕರೆ ಮಾವು ಎಂದು ಹಾಗು ಗೌರಿ ಹುಣ್ಣುಮೆಗೆ ಮಾವುಬಿಡುವ ಮರವನ್ನ ಗೌರಿಮಾವು ಎಂದು ಮನೆಯವರು ಹೆಸರಿಟ್ಟಿದ್ದರು.


ನಮ್ಮ ಮೆನೆಯ ಮಕ್ಕಳ ಸೈನ್ಯವೆಲ್ಲ ಈ ಮಾವುಗಳ ಅಡಿಯಲ್ಲೇ ಬಾಲ್ಯವನ್ನ ಕಳೆದದ್ದು. ಪ್ರತಿ ವರ್ಷ ಮಾವಿನ ಕಾಯಿಗಳಿಂದ ಮರಗಳ ಟೊಂಗೆಗಳು ಭಾರದಿಂದ ಜೋತು ಬೀಳುತ್ತಿದ್ದವು.ಹಸಿ ಮಾವಿನ ಕಾಯಿ ಮತ್ತು ಉಪ್ಪು ;ಬಾಯಲ್ಲಿ ನೀರು . ಸಾವಿರಾರು ಮಾವುಗಳನ್ನ ಕೊಡುವ ಮರಗಳು . ಮಕ್ಕಳಿಗೆಲ್ಲ ಒಂದು ಸುಗ್ಗಿಯ ಕಾಲ ಇದು . ಯಾವುದಾರೊಂದು ಮಾವು ಕೆಳಗೆ ಬಿದ್ದಿತ್ತಂದರೆ ಅದನ್ನ ಒತ್ತಿ ಒತ್ತಿ ನೋಡಿ ಹಣ್ಣಿಗೆ ಬಂದಿದೆಂದು ಖಚಿತಪಡಿಸಕೊಳ್ಳಬೇಕಿತ್ತು. ಯಾವುದಾದರೊಂದು ಅರೆಹಣ್ಣು ಕಂಡರೆ ಇಡೀ ಮಾವಿನ ಮರದ ಹಣ್ಣುಗಳು ಹಣ್ಣಿಗೆಬಂದಂತೆ .ಅರೆಮಾವಿನ ಹಣ್ಣನ್ನ ಪಾಡಗಾಯಿ ಅನ್ನುತ್ತಿದ್ದರು . ಮನೆಯ ಅಜ್ಜಿಗೆ ತೋರಿಸಿದಮೇಲೆ ಅದನ್ನ ಅವರು ಪಾಡಗಾಯಿಯೆಂದು ಖಚಿತಪಡಿಸುತ್ತಿದ್ದರು .


ಮನೆಯವರು ಮಾವಿನಕಾಯಿಗಳನ್ನ ಹರಿಯಿವುದು ಅಷ್ಟು ಸುಲಭವಾಗಿರಲಿಲ್ಲ. ಮರಗಳು ಎತ್ತರವಾಗಿರುವುದರಿಂದ ಹಾಗು  ರೆಂಬೆ -ಟೊಂಗೆಗಳಿಂದ ಮಾವುಗಳನ್ನ ಹರಿದು ಕೆಳಗೆ ಕೊಡುವುದು ಅಷ್ಟೊಂದು ಅನಾಯಸದ ಕೆಲಸವಾಗಿರಲಿಲ್ಲ . ಕಾಯಿಗಳನ್ನ ಕೆಳಗೆ ಇಳಿಸುವಾಗ ಪೆಟ್ಟಾದರೆ ಹಣ್ಣಾಕಿದಮೇಲೆ ಕೊಳೆತು ಹೋಗುತ್ತಿದ್ದವು. ನಾಜೂಕಿನ ಕೆಲಸವಾದುದರಿಂದ  ಊರಿನಲ್ಲಿ ಒಂದೆರಡು ಮನೆತನಗಳು ಇದನ್ನ ಕುಲಕಸುಬಾಗಿ ಮಾಡಿಕೊಂಡಿದ್ದರು . ಈ ಕೆಲಸದಲ್ಲಿ ತೊಡಗಿರುವವನ್ನ ಮಾವಿನ ಕಾಯಿ ಇಳಿಸುವವ ಎಂದು ಕರೆಯುತ್ತಿದ್ದರು . ಮಾವುಗಳನ್ನ ಇಳಿಸುವ ಪರನಿತರು ತಮ್ಮದೇಯಾದ ಉಪಕರಣಗಳನ್ನ ಹೊಂದಿದ್ದರು . ಒಂದು ಉದ್ದನೆಯ ಬಿದಿರಿನ ಗಳ;ಅದರ ಮುಂದೆ ಒಂದು ತೆಳುವಾದ ವೃತ್ತಾಕಾರದ ಕಬ್ಬಿಣ ಮತ್ತು ಅದರ ಸುತ್ತುವರೆದ ಬೊಗಸೆ ಆಕಾರದ ನಾರಿನಿಂದ ಮಾಡಿದೆ ಜಾಳಿಗೆ . ಇದರಿಂದ ಮಾವನ್ನ ಎಳೆದು ಮರದ ತುಂಬಿನಿಂದ ಬಿಡಿಸಿ , ಜಾಲದಲ್ಲಿ ಹಿಡಿಯುವುದು . ಇದು ಒಂದು ಹಂತ . ಇದಾದ ಮೇಲೆ ಮಾವುಗಳನ್ನ ಜಾಳಿಗೆಯಿಂದ ತೆಗೆದು ಇನ್ನೊಂದು ದೊಡ್ಡದಾದ ನಾರಿನಿಂದ ಮಾಡಿದೆ ಜಾಳಿಗೆ ಹಾಕುವುದು . ದೊಡ್ಡ ಜಾಳಿಗೆ ತುಂಬಿದ ಮೇಲೆ ಅದನ್ನ ಕೆಳಗೆ ನಿಧಾನವಾಗಿ ಇಳಿಸುವುದು . ಕೆಳಗೆ ನಿಂತಿರುವವರು ಅದನ್ನ ಬೇರೆ ಕಡೆ ಎಳೆದು ಗುಂಪು ಹಾಕೋದು . ಗೋದಿ ಹುಲ್ಲನ್ನ ಬೇಕಾದಷ್ಟು ಬಳಿಸಿ ಮಾವುಗಳನ್ನ ಹಣ್ಣಾಗಿಸುವುದು ಒಂದು ಸ್ವಾಭಾವಿಕ ಪ್ರಕ್ರಿಯೆಯಾಗಿತ್ತು . ಕಾಯಿಗಳು ಹಣ್ಣಾಗುತ್ತಿದ್ದಂತೆ ಮನೆಯಲ್ಲ ಮಾವಿನ ವಾಸನೆ ಪಸರಿಸುತ್ತಿತ್ತು.


ಅರಸಿನ ರಾಶಿ ಆದಮೇಲೆ ಚಿಲುಗಳನ್ನ ಗೌರಿ ಮಾವಿನ ಮರದ ಕೆಳಗೆ ಒಟ್ಟಲಾಗುತ್ತಿತ್ತು. ತುಂಬಾ ಬೆಲೆಬಾಳುವ ಬದುಕು ಆದುದರಿಂದ ರಾತ್ರಿ ಕಳ್ಳರ ಹಾವಳಿ . ಕಾವಲು ಕಾಯಲು ದೊಡ್ಡಪ್ಪ ಮತ್ತು ಚಿಕ್ಕಪ್ಪ ಮರದ ಕೆಳಗೆ ಮಲಗಿರುತ್ತಿದ್ದರು. ಒಂದು ದಿನ ಘಾಡ ನಿದ್ರೆಯಿಂದ ಚಿಕ್ಕಪ್ಪ ಮತ್ತು ದೊಡ್ಡಪ್ಪ ಪಕ್ಕದಲ್ಲಿ ಮಲಗಿದ್ದ ನಾಯಿಯ ಬೊಗುಳುವಿಕೆಯಿಂದ ಎದ್ದರು . ಹಾಗೇನೇ ಪಕ್ಕದಲ್ಲಿದ್ದ ಟಾರ್ಚ್ ನ್ನ ನಾಯಿ ಬೊಗುಳುವ ದಿಕ್ಕಿಗೆ ಹಿಡಿದರು . ನಾಯಿ ತನ್ನ ಎರಡು ಕಾಲುಗಳ್ಳನ ಮುಂದೆ ಮಾಡಿ ಜೋರಾಗಿ ಹಾವಿನ ಕಡೆಗೆ ಬೊಗಳುತ್ತಿತ್ತು . ತಕ್ಷಣ ಎಚ್ಚೆತ್ತ ಅವರು ಹಾವನ್ನ ಹೊಡೆದು ಹಾಕಿ ತಮ್ಮ ಪ್ರಾಣವನ್ನ ಕಾಪಾಡಿದ ಶ್ವಾನಕ್ಕೆ ಶರಣೆಂದರು . 


ನಮ್ಮ ಮನೆಯ ಸುತ್ತ-ಮುತ್ತ ಯಾವ ಪ್ರಾಣಿಯಾಗಲಿ ಮನುಶ್ಯರಾಗಲಿ  ಸುಳಿದಾಡುತ್ತಿರಲಿಲ್ಲ. ಒಂದೊಮ್ಮೆ ಸನಿಹ ಬಂದರೆ ಅವರಿಗೆ ಗ್ರಹಚಾರ ಕಾದಿದೆ ಅಂತಲೇ ಹೇಳಬೇಕಿತ್ತು . ನಾಯಿಗೆ ದಿನಾಲೂ  ಗೋವಿನ ಜೋಳದ ನುಚ್ಚು ಹಾಲು ಅಚ್ಚು ಮೆಚ್ಚು. ಆಗಾಗ ಜೋಳದ ರೊಟ್ಟಿ ಕತ್ತರಿಸಿ ತಿನ್ನಲು ಬೇಕಿತ್ತು. ನಾಯಿಗೆ ನಮ್ಮ ಮನೆಯ ಎತ್ತುಗಳೆಂದರೆ ಬಲು ಪ್ರೀತಿ .ಕೆಂಪೆತ್ತು ಅಷ್ಟೇನು ಎತ್ತರವಿರಲ್ಲಿಲ . ಕುಳ್ಳಾಗಿ ಕಂಡರೂ ಅದರ ಶಕ್ತಿಗೆ ಯಾವೂರು ಎತ್ತುಗಳಿಗೆ ಸಮವಿರಲಿಲ್ಲ. ಹಾಗೇನೇ ಬಲು ಮುಂಗೋಪಿ . ಒಮ್ಮೆ ಸಿಟ್ಟಿನಿಂದ ಮೂಗುದಾರ ಜಗ್ಗಿ ಹಿಂದೆ ಸರಿತೆಂದರೆ ಆಯಿತು ಆವತ್ತಿನ ಊಳುಮೆ ಕೆಲಸ ನಿಂತಂತೆ . ಹಾಗಂತ ಬೇಕಾಬಿಟ್ಟಿಯಾಗಿ ವರ್ತಿಸೋ ಸ್ವಭಾವ ಕೆಂಪೆತ್ತಿನದಲ್ಲ. ಬಿಳಿ ಎತ್ತು ಸುಮಾರಾಗಿ ಎತ್ತರ, ಬಣ್ಣ ಬಿಳುಪು . ಮೂಲತಃ ಸಂಭಾವಿತ . ಕೆಂಪತ್ತನ್ನ ಮುಂದೆ ನಡೆಸಿಕೊಂಡು ಹೋಗುವ ಹಿರಿಯ . ಎರಡು ಜೋಡೆತ್ತುಗಳು ಮನೆಗೆ ಬಂದಿದ್ದುರಿಂದ ಆರ್ಥಿಕ ಪರಿಸ್ಥಿತಿ ಸುಧಾರಿಸಿತ್ತು . ಕೆಂಪೇತ್ತಿನ ಕಾಲಲ್ಲಿ ಲಕ್ಷ್ಮಿ ಬಿಳಿಎತ್ತಿನ ಕಾಲಲ್ಲಿ ಅಣ್ಣ ಇದೆ ಅನ್ನೋದನ್ನ ದೇವರ ಹೇಳುವವರು ಹೇಳಿದ್ದರಂತೆ . ಹೀಗಾಗಿ ಅವುಗಳನ್ನ ಮಾರುವ ಗೋಜಿಗೆ ಮನೆಯವರು ಹೋಗಿರಲಿಲ್ಲ . 


 ಎಲ್ಲಾದರೂ ಚಕ್ಕಡಿ ಗಾಡಿ ಹೂಡಿಕೊಂಡು ಹೊರಟರೆ ಸಾಕು ತಾನು ಸಹ ಯಾವುದೊ  ಜವಾಬ್ದಾರಿ ಹೊತ್ತುಕೊಂಡ ನಡೆದ ಮನೆಯ ಯಜಮಾನಂತೆ ಗಂಭೀರವಾಗಿ ಚಕ್ಕಡಿಯನ್ನ ಹಿಂಬಾಲಿಸುತ್ತಿತ್ತು ಕೆಂಪು ನಾಯಿ. ಯಾರಾದರೂ ಚಕ್ಕಡಿ ಹತ್ತಿರ ಬಂದರೆ ಸಾಕು ಗುರ್ರ್ ಅನ್ನುತ್ತಿತ್ತು . ಮದ್ಯಾಹ್ನದ ಬುತ್ತಿಯಲ್ಲಿ ಅದಕ್ಕೂ ಪಾಲಿರುತ್ತಿತು. ಹೊಲದ ಊಳುಮೆ ಮುಗಿದ ಮೇಲೆ ಮತ್ತೆ ಚಕಿಡಿಯನ್ನ ಹಿಂಬಾಲಿಸುತ್ತ ತೋಟದ ಮನೆಗೆ ಹೆಜ್ಜೆ ಹಾಕುತ್ತಿತ್ತು. ಊರು ಸಮೀಪಿಸುತ್ತ ಬಂದರೆ ಭಯ!. ಎಲ್ಲಾದರೂ ಊರ ಬೀದಿನಾಯಿಗಳು ಕಾಳಗಕ್ಕೆ ಇಳಿದು ನಮ್ಮ ನಾಯಿಯನ್ನ ಕಚ್ಚುತ್ತವೆ ಅನ್ನೋದೊಂದು ದುಗುಡ. ನಮ್ಮ ನಾಯಿ ಕಿಲಾಡಿ. ಊರು ಬರುತ್ತಿದ್ದಂತೆ  ಜೋರಾಗಿ ಓಡಿ ಹೋಗಿ ಊರಬಿಟ್ಟು ದೂರದಲ್ಲಿ ಚಕ್ಕಡಿ ಗಾಡಿಗಾಗಿ ಕಾಯುತ್ತಿತ್ತು.



ಕೆಂಪು ನಾಯಿ  ದೊಡ್ಡಪ್ಪ ಹಾಗು ಚಿಕ್ಕಪ್ಪನ ಜೀವ ಉಳಿಸಿದ್ದು ನಮ್ಮ ಮನೆತನದಲ್ಲಿ ಅಳಿಯದೆ ಉಳಿದ ಅಜ್ಜಾಗಿತ್ತು . ಹೀಗಿರಬೇಕಾದರೆ ಒಂದು ದಿನ ಅರಿಸಿನ ಕುದಿಸಿದಮೇಲೆ ಮನೆಯ ನೆರೆಯವರು ಅರಿಶಿನ ಒಲೆಯಲ್ಲಿರುವ ಬೂದಿ ಮಿಸ್ತ್ರಿತ ಬೆಂಕಿಯ ಕೆಂಡವನ್ನ ಒಂದು ಕಡೆ ಹರವಿದ್ದರು. ಮನೆಯ ಪಕ್ಕದಲ್ಲೇ ಇರುವುದರಿಂದ ಸಣ್ಣ ಮಕ್ಕಳಿಗೆ ಬಹಳ ಅಪಾಯಕಾರಿಯಾಗಿತ್ತು . ಹೊರಗಡೆಯಿಂದ ನೋಡಿದರೆ ಬೂದಿ ;ಒಳಗಡೆ ನಿಗಿ ನಿಗಿ ಕೆಂಡ . ಒಂದು ರೀತಿ ಬೂದಿ ಮುಚ್ಚಿದ ಕೆಂಡದಂತೆ ಇತ್ತು. ಆ ದಿನ ತಮ್ಮ ಅಂದರೆ ದೊಡ್ಡಪ್ಪನ ಮಗ ಆಡುತ್ತ ಸೈಕಲ್ ಟೈರ್ ಗಾಲಿಯನ್ನ ಬೂದಿ ಮುಚ್ಚಿದ ಕೆಂಡದಲ್ಲಿ ಕೆಡುವುತ್ತಾನೆ . ಏನು ತಿಳಿಯದ ಮಗು ಒಂದೇ ಸಮನೆ ನೇರವಾಗಿ ಬೂದಿಯಲ್ಲಿ ನಡೆಯುತ್ತಾನೆ . ಬೆಂಕಿಯ ಕೆಂಡದಿಂದ ಅವನ ಕಾಲುಗಳು ಸುಡಲಾರಂಭಿಸುತ್ತವೆ . ಒಂದೇ ಸಮನೆ ಅಳುತ್ತ ಚೀರುತ್ತಾ ಇದ್ದರು ಯಾರು ಅಲ್ಲಿ ಸುಳಿಯಲಿಲ್ಲ. ಮೊದಲೇ ತೋಟದ ಮನೆಆದುದರಿಂದ ಜನ ಬಲು ವಿರಳ. ಅಷ್ಟರಲ್ಲೇ ಮನೆಯ ನಾಯಿ  ಆಗಿರುವ ಅನಾಹುತವನ್ನ ಗಮನಿಸುತ್ತಲೇ ಒಂದೇ ಸಮನೆ ಮಗುವನ್ನ ಅಲ್ಲಿಂದ ಹೊರಗೆ ತರಲು ಆಕಡೆ ಯಿಕಡೆ ಚಿಕ್ಕದಾಗಿ ಬೊಗಳುತ್ತ ಚಡಪಡಿಸುತ್ತದೆ. ತನ್ನಕಡೆಯಿಂದ ಆಗದ ಕೆಲಸವೆಂದು ತಿಳಿದು ಮನೆಯ ಯಜಮಾನನ ಕಡೆಗೆ ಓಡುತ್ತದೆ . ಸಮಯ ಬಹಳ ಕಡಿಮೆ . ಹೆಚ್ಚು ಕಡಿಮೆ ಆದರೆ ಮಗುವಿನ ಪ್ರಾಣಕ್ಕೆ ಸಂಚು ಕಾದಿತ್ತು. ನಮ್ಮ ಚಿಕ್ಕಪ್ಪ ಮನೆಯ ಮುಂದಿನ ಬದಿಯನ್ನು ದಾಟಿ ಕೈಯಲ್ಲಿ ಚಂಬು ಹಿಡಿದು ಬಯಲುಕಡೆಗೆ ಹೊರಟಿದ್ದಿರು . ಹಿಂದಿನಿಂದ ಯಾರೋ ಜೋರಾಗಿ ಬಂದಂತೆ ಅನಿಸಿ ಹಿಂದಿರುಗುವಸ್ಟರಲ್ಲಿ ನಾಯಿ ಒಮ್ಮಿಂದಲೇ ಅವರ ಕೈಯಲ್ಲಿದ್ದ ಚೊಂಬಣ್ಣ ಚೆಲ್ಲಿತು . ಅದು ಅವರಿಗೆ ಏನೋ ಕೇಡಾಗಿದೆ ಬೇಗ ಬನ್ನಿ ಅನ್ನೋ ಸೂಚನೆ ಕೊಟ್ಟಂತಿತ್ತು . ಅವರು ನಾಯಿಯನ್ನ ಹಿಂಬಾಲಿಸುತ್ತ ಮನೆ ಕಡೆಗೆ ಓಡಿದರು. ಮಗುವಿನ ಗೋಳಾಟ ನೋಡಿ ಗಾಬರಿಯಿಂದ ಒಮ್ಮಿಂದಲೇ ಮಗುವನ್ನ ಬೂದಿ ಮುಚ್ಚಿದ ಕೆಂಡದಿಂದ ಹೊರತೆಗೆದರು . ದಿಗ್ಬ್ರಮೆಯಿಂದಲೇ ಆದಷ್ಟು ಬೇಗ ದವಾಖಾನೆ ಕರೆದೊಯ್ದು ಸುಟ್ಟ ಗಾಯಗಳಿಕೆ ಚಿಕಿಸ್ತೆ ಕೊಡಿಸಿದರು. ಆದ ಘಟನೆಯನ್ನ ಚಿಕ್ಕಪ್ಪ ಕಥೆಮಾಡಿ ಮನೆಮಂದಿಗೆ ಹೇಳುತ್ತಿದ್ದಂತೆ ಮನೆಮಂದಿಗೆಲ್ಲ ನಾಯಿಯು ದೈವೀ ಸ್ವರೂಪವಿದ್ದಂತೆ ಕಂಡಿತು.


ಒಂದು ದಿನ ಅವ್ವ ಕಳವಳದಿಂದ ನಾಯಿಯನ್ನು ಬಯ್ಯುತ್ತ " ಹಾಟ್ಯಾಂದು  ಎಲ್ಲ ಹಾಳಾಗೋಯ್ತೋ ?. ಎರಡು ದಿನದಿಂದ ಊಟಕ್ಕಬಂದಿಲ್ಲ! " ಅನ್ನುತ ಗಾಬರಿ ಯಿಂದ ಖಿನ್ನತೆಯನ್ನು ಹೊರಹಾಕುತ್ತಿದ್ದರು . ಅವ್ವನ ಕಳವಳಕ್ಕೂ  ಕಾರಣವಿತ್ತು . ಯಾವತ್ತೂ  ಮನೆ ಸುತ್ತ ಮುತ್ತ , ದನದ ಕೊಟ್ಟಿಗೆ ಹತ್ತಿರ ಕಾಣುವ ನಾಯಿಯು ಕೆಲವು ದಿನಗಳಿಂದ ನಾಪತ್ತೆಯಾಗಿತ್ತು. ಬೆದಿಗೆ ಬಂದ ಹೆಣ್ಣಾಯಿಯ ಬೆನ್ನು ಹತ್ತಿ  ಎಲ್ಲಿಗೆ ಬೇಕೊ ಅಲ್ಲಿಗೆ ಓಡಾಡಿತ್ತುದೆಯಂತ ಮನೆ ನೆರೆಹೊರೆಯವರು ಆಡಿಕೊಳ್ಳುತ್ತಿದ್ದರು . ಕೆಲವು ದಿನಗಳ ನಂತರ ನಾಯಿಯು ಮನೆ  ಸುತ್ತ ಪ್ರತ್ಯಕ್ಷವಾಯಿತು . ಆದರೆ ಅದು ಮೊದಲಿನ ತರಹ ಇರಲಿಲ್ಲ . ಒಂದು ಕಿವಿಯನ್ನ ಕೆಳಗೆ ಮಾಡಿ ಅತ್ತಿತ್ತ ಓಡುತ್ತಿತ್ತು .


ಮನುಷ್ಯರೇ ಹೀಗೆ ಎಲ್ಲ ಪ್ರಾಣಿಗಳಿಗಿಂತ ತಾನು ಶ್ರೇಷ್ಠ ಅನ್ನೋ ಕಾಯಿಲೆಯಿಂದ ಬಳಲುತ್ತಿದ್ದಾನೆ . ಎಲ್ಲವೂ ಸರಿಯಿದ್ದರೂ ತನ್ನ ದುರಾಶೆಗೆ ಸಿಕ್ಕವರ ಮನೆಗೆ ಕೊಳ್ಳಿಯಿಡುತ್ತಾನೆ . 

ನಾಯಿಯು ಒಂದು ಹಂತಕ್ಕೆ ಹುಚ್ಚು ಹಿಡಿದಿದ್ದರು ಸಹಿತ ಸುತ್ತಲಿರುವ ಜನಕ್ಕೆ ಕಚ್ಚಿದಿಲ್ಲ . ತನ್ನ ರೋದನೆಯೊಂದಿಗೆ ಓಡಾಡುತ್ತಿತ್ತು . 


ಊರಲ್ಲಿ ಬೇರೆ ಬೇರೆ ತೋಟಗಳು ಇದ್ದರು ಸಹ ಮೇಲಕಿನ ತೋಟ ನಮ್ಮನೆಲ್ಲ ಕೈ ಬಿಸಿ ಕರೆಯುತ್ತಿತ್ತು . ಒಂದು ದಿನ ತೋಟದ ಮನೆಯ ಹತ್ತಿರ ಸಮೀಪೂಸುತ್ತಿದ್ದಂತೆ ಅಲ್ಲಿ ನಾನು ಒಂದು ಘಟನೆಗೆ ಸಾಕ್ಸಿಯಾದೆ . ನಾಯಿಯು ತನ್ನ ಪಾಡಿಗೆ ಚಿಕ್ಕಪ್ಪನ ಹತ್ತಿರ ನಿಂತಿತ್ತು . ಅದಕ್ಕೆ ಚಿಕ್ಕಪ್ಪ ಅಂದ್ರೆ ಬಲು ಪ್ರೀತೀ . ಅಷ್ಟೇನು ದೊಡ್ಡದಲ್ಲದ ಬನ್ನಿ ಮರಕ್ಕೆ ಹಗ್ಗ ಹಾಕುತ್ತಿದ್ದರು . ನಾನು ಹತ್ತಿರ ಹೋದಂತೆ ಬರ ಬೇಡವೆಂದು ಸನ್ನೆ ಮಾಡಿದರು . ಅವರ ಮುಖದಲ್ಲಿ ಅಷ್ಟೇನು ಖುಷಿ ಇರಲಿಲ್ಲ ;ಚಿಂತೆಯಲ್ಲಿ ಜಾರಿದ್ದರು . ಅವರು ತಮಗೆ ತೋಚಿದಂತೆ 

ಮರಕ್ಕೆ  ಹಗ್ಗ ಹಾಕಿ  ನಾಯಿಯ ಕೊರಳಿಗೆ ಒಂದು ಸುತ್ತು ಹಾಕಿದರು . ಎಂದು ನೋಡದ ನೋಟ ಅದು ! . ಚಿಕ್ಕಪ್ಪ ನೋವಿನಿಂದ ಹಗ್ಗವನ್ನ ಕೆಳಕ್ಕೆ ಎಳೆಯುತ್ತಲೇ ನಾಯಿಯು ತನ್ನ ಕೊನೆಊಸಿರು ಬಿಟ್ಟಿತು . ಹುಚ್ಚು ನಾಯಿಯನ್ನ ಹಾಗೆ ಬಿಟ್ಟರೆ ಯಾರಿಗೂ ಒಳ್ಳೇದಲ್ಲ ಅನ್ನುತಾ ನಿಟ್ಟಿಸಿರು ಬಿಟ್ಟರು ಚಿಕ್ಕಪ್ಪ . ನಾಯಿಯ ಶವವನ್ನ ಮರದಿಂದ ಸ್ವಲ್ಪ ದೂರದಲ್ಲಿ ಮಣ್ಣು ಮಾಡಲಾಯಿತು . ಅರೆ ತಿಳುವಳಿಕೆ ನನಗೆ ಆಗ;ಒಂದು ತಿಳಿಯಲಿಲ್ಲ.



ಕೆಂಪು ನಾಯಿ ಹೋದಮೇಲೆ ಮನೆಯಲ್ಲಿ ಯಾರು ನಾಯಿಯನ್ನ ಸಾಕುವ ಗೋಜಿಗೆ ಹೋಗಲಿಲ್ಲ . ಸುಮಾರು ನಾಲ್ಕು ವರ್ಷಗಳ ನಂತರ ನಮ್ಮ ನೆರೆಯ ಕುರುಬರ ಮಾಯಪ್ಪ ಅಜ್ಜ ಒಂದು ಬಿಳಿ ನಾಯಿ ಮರಿಯನ್ನ ಸಾಕಲು ಕೊಟ್ಟರು . ನಂಗಂತೂ ಎಲ್ಲಿಲ್ಲದ ಹುಮ್ಮಸ್ಸು !. ಅದರ ಜ್ಯೋತೆ ಆಡುತ್ತ ಬೆಳೆದೆ . ಅದು ನೋಡು ನೋಡುತ್ತಲೇ ಬೆಳೆದು ದೊಡ್ಡದಾಯಿತು . 

ಅದಕ್ಕೂ ಅದೇ ಕೆಂಪು ನಾಯಿಯ ಜವಾಬ್ದಾರಿ . ದನದ ಕೊಟ್ಟಿಗೆ ಹಾಗು ತೋಟ ಕಾಯುವಿಕೆ . ಸ್ವಲ್ಪ ಮಟ್ಟಿಗೆ ಕೆಂಪು ನಾಯಿಯ ನೆನಪನ್ನು ಅಳಿಸಿತು ಅನ್ನಲೇಬೇಕು . ಕೆಲವಂದು ಘಟನೆಗಳು ಕೆಂಪು ನಾಯಿಯ ಮರೆಯುವುದು ಅಷ್ಟು ಸುಲಭವಾಗಿರಲಿಲ್ಲ . ನಾಯಿಯು ಸೊಗಸಾಗಿ ಬೆಳೆದಿತ್ತು . ದೂರದಿಂದಲೇ ನೋಡಿ ಗುರು ಹಿಡಿಯಬಹುತ್ತಿತ್ತು ಇದು ನಮ್ಮ ನಾಯಿಯೆಂದು . ಆದರೆ ದುರಾದೃಷ್ಟ ಅಂದ್ರೆ ಇದೆ ಇರಬೇಕು . ಆದಿನ ನಾಯಿಯನ್ನ ಎಲ್ಲಿ ನೋಡಿದರು ಸಿಗಲಿಲ್ಲ . "ಯಾರಿಗೆ ಯೇನ ಮಾಡಿದ್ವಿ ನಾವು ? ನಮ್ಮ ನಾಯಿಗೆ ವಿಷ ಹಾಕಿದರೂ !. ಅವ್ವ ಬೇಸರದಿಂದ ರೇಗಾಡುತ್ತಿತ್ತರು . ನಾನು ಬಿಡಲಿಲ್ಲ; ಗುಡ್ಡದ ಮೇಲೆ ಒಡಿ ಹೋಗಿ ನೋಡಿದೆ . ಒಂದು ತೆಗ್ಗಿನಲ್ಲಿ ಶವವಾಗಿ ಬಿದ್ದಿರುವುದನ್ನ ಕಂಡು ಹೃದಯ ತುಂಬಿ ಬಂತು . ನಾಯಿಯು ಅವರ ಇವರ ತೋಟಕ್ಕೆ ಹೋಗಿ ಹಸಿ ಗೋವಿನ ಜೋಳವನ್ನು ತಿನ್ನುತ್ತಿತ್ತಂತೆ . ಅದಕ್ಕೆ ಊಟಕ್ಕೆ ವಿಷ ಬೇರೆಯಿಸಿ  ಕೊಂದರಂತೆ. ಹೀಗೆ  ಗಾಳಿಸುದ್ದಿಯು ಅದು ಹೋದಮೇಲೆ ಹರದಾಡುತ್ತಿತ್ತು .


------------------------------------------------------------------------------------------------------


ಬಿಳಿ ನಾಯಿ ಮರೆಯಾದಮೇಲೆ ತೋಟದ ಮನೆಗೆ ಏನೋ ಕೊರತೆ ಎದ್ದು ಕಾಣುತ್ತಿತ್ತು. ಮನೆಯವರು ಮತ್ತೊಂದು ನಾಯಿಯನ್ನ ಸಾಕುವ ಉಸಾಬರಿಗೆ ಹೋಗಲಿಲ್ಲ . ಹಾಗೆ ದಿನ ಕಳೆದವು . 

 ರೈತಾಪಿ ಜನರು ಹೊಲ , ತೋಟ-ಗದ್ದೆ , ದನ-ಕರ ಇದೆ ಅವರ ಪ್ರಪಂಚ . ಮನೆಯಲ್ಲಿ ಎರಡು ಕೊಟ್ಟಿಗೆಗಳು . ಒಂದು ಕೊಟ್ಟಿಗೆ ಎಮ್ಮೆಗಳಿಗೆ ಆದರೆ ಇನ್ನೊಂದು ಕೊಟ್ಟಿಗೆ ಆಕಳುಗಳಿಗೆ . ಆಕಾಲದಲ್ಲಿ ನಮ್ಮಜ್ಜಿಗೆ ತವರು ಮನೆಯವರು ಬಳುವಳಿಯಾಗಿ ಒಂದು ಎಮ್ಮೆ ಕರು ಕೊಟ್ಟಿಂದ್ದರಂತೆ. ಅದರಿಂದ ನಾಲ್ಕಾರು ಸೂಲುಗಳನ್ನ ಎಯಿಸಿಕೊಂಡು ಅದರಿಂದ ಬಂದ ಹೈನಿನಿಂದ ತಮ್ಮ ಆರು ಮಕ್ಕಳನ್ನು ಸಾಕಿದರಂತೆ  ನಮ್ಮ ಅಜ್ಜಿ . 


--to be continued





Sunday 3 April 2022

Ugadi ಯುಗಾದಿ

ಮಾವಿನ ಹುಳಿ , 

ಬೇವಿನ ಕಹಿ ,

ಬೆಲ್ಲದ  ಸಿಹಿ ,

ಹೊಂಗೆಯ  ನೆರಳು 

ಭೂತಾಯಿಯ  ಸೊಬಗು  . 

ಯುಗಾದಿ ಮರಳಿ ಬರುತಿದೆ , 

ಹೊಸ ವರುಷದ ನೆನಪು ತರುತಿದೆ .

ಯುಗಾದಿಯ  ಹಬ್ಬದ ಶುಭಾಷಯಗಳು 

—Prashant Gs