ಸಂಜೆಯಾದ ನಂತರ ಊರಿನ ಕಟ್ಟೆಯ ಮೇಲೆ ಕುಳಿತುಕೊಂಡು ಒಂದಿಷ್ಟು ಹರಟೆ ಹೊಡೆಯುವುದು ನನ್ನ ಹವ್ಯಾಸ. ಹೀಗೆ ಒಂದು ದಿನ ನಮ್ಮೂರ ಹಿರಿಯರೊಬ್ಬರು ಮಾತಿಗೆ ಸಿಕ್ಕಿದ್ದರು.ಅವರ ಹೆಸರು ಶಿವಪ್ಪ ಚಟ್ಟಿ. ನಾನು ನನ್ನ ತೋಟದ ಮನೆಯ ಸುತ್ತಮುತ್ತ ಒಂದು ಬೋರ್ವೆಲ್ ಹಾಕುವ ಇಂಗಿತ ವ್ಯಕ್ತಪಡಿಸಿದೆ. ಅದಕ್ಕೆ ಅವರು ತಾವು ಬೋರ್ವೆಲ್ ಹಾಕಿಸಿದ ಘಟನೆಯನ್ನು ನನ್ನ ಮುಂದೆ ಹಂಚಿಕೊಂಡರು. ಅದು ಎಷ್ಟು ವರ್ಷಗಳ ಹಿಂದಿನ ಘಟನೆಯೋ ಗೊತ್ತಿಲ್ಲ. ಅಂದು ಅವರು ತಮ್ಮ ತೋಟದಲ್ಲಿ ಕಲ್ಲುಗಳನ್ನು ಆಯುತ್ತಾ, ಮನೆಯ ಚಿಕ್ಕ ಮಕ್ಕಳ ಜೊತೆ ಕೆಲಸದಲ್ಲಿ ನಿರತರಾಗಿದ್ದರು. ಅದು ಕಡು ಬೇಸಿಗೆಯ ಸಮಯವಾಗಿದ್ದರಿಂದ ಅವರ ಹತ್ತಿರ ಒಂದು ಪಾತ್ರೆಯಲ್ಲಿ ಮಾತ್ರ ನೀರಿತ್ತು. ಸುತ್ತಮುತ್ತ ಎಲ್ಲಿಯೂ ನೀರು ಸಿಗದಂತಹ ಜಾಗವದು. ದೂರದಲ್ಲೊಂದು ಲಕ್ಷ್ಮಿ ಗುಡಿಯಿತ್ತು, ಅಲ್ಲಿ ಮಾತ್ರ ನೀರು ಸಿಗುತ್ತಿತ್ತು. ಅದು ಅವರ ತೋಟಕ್ಕೆ ಹತ್ತಿರದ ದಾರಿಯಾಗಿತ್ತು.
ಅಷ್ಟರಲ್ಲಿ ಒಬ್ಬ ವಯಸ್ಸಾದವರು ಬಾಯಾರಿಕೆಯಿಂದ ಬಳಲುತ್ತಾ ಇವರ ಹತ್ತಿರ ಬಂದು, ನೀರಿನ ಪಾತ್ರೆಯನ್ನು ನೋಡಿ ತಮಗೆ ನೀರು ಬೇಕೆಂದು ಕೇಳಿದರು. ನಮ್ಮ ಊರಿನ ಹಿರಿಯರು "ಚಿಕ್ಕ ಮಕ್ಕಳಿಗೆಂದು ತಂದ ನೀರನ್ನು ಇವರಿಗೆ ಹೇಗೆ ಕೊಡುವುದು?" ಎಂದು ಯೋಚಿಸುತ್ತಾ ಗೊಂದಲಕ್ಕೆ ಸಿಲುಕಿದರು. "ಮಕ್ಕಳಿಗೆ ನೀರು ಬೇಕೆಂದರೆ ದೇವಸ್ಥಾನದಿಂದ ತಂದರಾಯಿತು" ಎಂದುಕೊಳ್ಳುತ್ತಲೇ ಪಾತ್ರೆಯನ್ನು ಮುಟ್ಟಿದರು. ಆದರೆ ಆ ನೀರು ಸುಡುವಷ್ಟು ಬಿಸಿಯಾಗಿತ್ತು! "ಇಷ್ಟು ಬಿಸಿಯಾದ ನೀರನ್ನು ವಯಸ್ಸಾದ ಮನುಷ್ಯನಿಗೆ ಕುಡಿಯಲು ಹೇಗೆ ಕೊಡುವುದು?" ಎನ್ನುವ ಮತ್ತೊಂದು ಗೊಂದಲ. ಮಕ್ಕಳಿಗೆ ನೀರು ಬೇಕೆಂದರೆ ಏನು ಮಾಡುವುದು? ಕೊಡುವುದಾದರೆ ನೀರು ಬಿಸಿಯಾಗಿದೆ? ತಲೆಯಲ್ಲಿ ಗೊಂದಲದ ಗೂಡೇ ನಿರ್ಮಾಣವಾಯಿತು! ಕೊನೆಗೆ ಅವರು ಆ ವೃದ್ಧರಿಗೆ ನೀರನ್ನು ಕೊಟ್ಟರು.
ಬಾಯಾರಿಕೆ ನೀಗಿದ ಮೇಲೆ ಆ ವೃದ್ಧರು "ನಿನ್ನ ಮನದ ಆಸೆ ಈಡೇರಲಿ" ಎಂದು ಹರಸಿ ಅಲ್ಲಿಂದ ಹೊರಟುಹೋದರು. ರೈತನಿಗೆ ಬಂಜರು ಭೂಮಿಯಲ್ಲಿ ನೀರು ಸಿಕ್ಕರೆ ಸಾಕು, ಅವನ ಜನ್ಮವೇ ಸಾರ್ಥಕ. ಆ ಹಿರಿಯರು ವೃದ್ಧರಿಗೆ ನೀರು ಕುಡಿಯಲು ಕೊಟ್ಟ ಅದೇ ಜಾಗದಲ್ಲಿ ಬೋರ್ವೆಲ್ ಹಾಕಿಸಿದರು. ಆಶ್ಚರ್ಯವೆಂಬಂತೆ ಮನಸ್ಸಿಗೆ ಸಮಾಧಾನವಾಗುವಷ್ಟು ನೀರು ಹರಿಯಿತು! ಆ ಬಂಜರು ಭೂಮಿ ಮಲೆನಾಡಿನಂತೆ ಹಸಿರಾಯಿತು. ದನಕರುಗಳನ್ನು ಸಾಕಲು ಅನುಕೂಲವಾಯಿತು; ಅವರ ಬಾಳು ಹಸನಾಯಿತು. ಮನುಷ್ಯನಿಗೆ ತಾನು ಮಾಡಿದ ಉಪಕಾರದಿಂದಲೇ ತನಗೆ ಒಳ್ಳೆಯದಾಯಿತು ಅನ್ನುವ ಅರಿವು ಬಂದರೆ, ಅವನ ಮನಸ್ಸೇ ಒಂದು ಮಂದಿರವಿದ್ದಂತೆ.
Prahsant Savadi
