Saturday 8 June 2024

ಅಂಧಕಾರ

ಸಮಾಜದ ಕಣ್ಣಿಗೆ ಗುರಿಯಾಗಿ ದಿಕ್ಕುಗಾಣದೆ ಅಲೆಯುತ್ತ , ನಿಂದನೆಗಳನ್ನ ನೀರು ಕುಡಿದಂತೆ ಸಲೀಸಾಗಿ ಬದುಕು ಸವೆಸುತ್ತ, ಪರ್ವತ ಗಿರಿಯ ಮಲ್ಲನಿಗೆ ಮನಸೋತು ಅವನನ್ನೇ ಮನದಣಿಯನನ್ನಾಗಿ  ಮಾಡಿಕೊಂಡು ಭಕ್ತಿಯ ಪ್ರಕರ್ಷಯಲ್ಲಿ ಮೈ ಮರೆತಿದ್ದಳು ಅಕ್ಕ . ಭಕ್ತಿಯ ಸಂಗಡ ಹುಡುಕುತ್ತ , ಕಲ್ಯಾಣವನ್ನ ಸೇರಿ ಶರಣರ ಸಂಗದಿಂದ ಶರಣೆಯಾಗಿ , ಮಲ್ಲಿಕಾರ್ಜುನನ ಶಿರದ ಚಂದ್ರನಂತೆ ಪ್ರಕಾಶಿಸಿ ಆವರಿಸಿರುವ ಅಂಧಕಾರವನ್ನು ಬಯಲುಮಾಡಿದಳು. ಅಕ್ಕಳ ಕಥೆ ಸುಮಾರು ೮೦೦ ತಲೆಮಾರಿನ ಹಿಂದಿನ ಮಾತು . 

ಎಲ್ಲರೂ ಸಮ , ಗಂಡು ಹೆಣ್ಣು ಭೇದವಿಲ್ಲ ಅನ್ನುವ ೨೧ ನೇ ಯಾ ಶತಮಾನವು ಆಗಾಗ ಹೆಣ್ಣಿನ ಮೇಲೆ ಕ್ರೂರತೆಯನ್ನ ಮೆರೆಯುತ್ತಿದೆ. 

ಕಣ್ಣುಗಳಲ್ಲಿ ತೀಕ್ಷ್ಣತೆ , ಚುರುಕಾದ ಬುದ್ದಿ, ಎಳ್ಳು ಹುರಿದಂತೆ ಮಾತು. ಕಾಲೇಜಿನಲ್ಲಿ ಎಲ್ಲದರಲ್ಲೂ ಮುಂದೆ . ಓದುವುದರಲ್ಲೂ , ಬರಿಯುವುದರಲ್ಲೂ , ಆಡುವುದರಲ್ಲೂ ಹಾಗೆ ಗೆಳೆತನ ಮಾಡುವುದರಲ್ಲೂ . ಅಪ್ಪ ಅಮ್ಮನಿಗೆ ಮುದ್ದಾದ ಮಗಳು . ಬಹಳ ವರ್ಷಗಳ ಪೂಜಾ  ಫಲ . ಬೆಂಗಳೂರಿನ ಗ್ರಾಮ ದೇವತೆ ಅನ್ನಮ್ಮನಿಗೆ ಸೇವೆ ಸಲ್ಲಿಸಿ ಪಡೆದಂತ ಮಗುವಿಗೆ ಅನ್ನಮ್ಮನೇ ಎಂದು ಹೆಸರಿಟ್ಟು , ಪ್ರೀತಿಯಿಂದ ಅನ್ನು ಎಂದು ಕರೆಯುತ್ತಿದ್ದರು. ಅಪ್ಪ ಚಿಕ್ಕ ಪೇಟೆಯಲ್ಲಿ ಅರಿವೇ ವ್ಯಾಪಾರೀ , ಅಮ್ಮ ಮನೆಯಜಮಾನಿ. ಯಾವ ನೋವುವಿಲ್ಲದೆ ಬೆಳೆಸಿದ್ದರು ಮನೆಯವರು .

ಯವ್ವನ ಕಾಲಿಡುತ್ತಿದ್ದಂತೆ ಅಂದವಾಗಿ ಬೆಳೆದಳು ಅನ್ನು .ಬೀಗು ಬಿನ್ನಾಣವಿಲ್ಲದೆ ಎಲ್ಲರ ಜ್ಯೋತೆ ಬೆರೆಯುತ್ತಿದ್ದಳು. ಹುಡುಗಿಯರಷ್ಟೇ ಅಲ್ಲ , ಅವಳಿಗೆ ತುಂಬಾ ಹುಡುಗರು ಗೆಳೆಯರಾಗಿದ್ದರು . 

ಕನ್ನಡ ರಾಜ್ಯೋತ್ಸವ ಬಂದರೆ ಸಾಕು , ಕಲಾವಿದರಿಗೆ ಮನೆಯ ಊಟ ಮಾಡುವುದಕ್ಕೂ ಸಮಯವಿರಲ್ಲ . ಐದಾರು ತಿಂಗಳು ಬಿಡದೆ ನಡೆಯುವ ಕಾರ್ಯಕ್ರಮಗಳು . ಅನ್ನುವಿನ ಗೆಳೆಯ ರಾಜೇಶನು ಬಳಿ ಪೇಟೆಯ ವಾಸಿ.ಅಪ್ಪ ಬಹಳ ವರ್ಷಗಳಿಂದ ಆರ್ಕೆಸ್ಟ್ರ ನಡೆಸಿಕೊಂಡು ಬರುದ್ದಿದ್ದರು. ಸಹಜವಾಗಿ ಮಗನಿಗೆ ಹಾಡುವುದು ಕರಗತವಾಗಿತ್ತು. ರಾಜೇಶನಿಗೆ ಓದುವುದರಲ್ಲಿ ಆಸಕ್ತಿ ಅಷ್ಟಕ್ಕೇ ಇತ್ತು . ಎಕ್ಸಾಮ್ ಬರೆದನಂತರ ಅವನು ಯಾವಹೊತ್ತು  ಫಲಿಂತಾಶಕ್ಕೆ ದಾರಿ ಕಾದವನೇ ಅಲ್ಲ . 

ಅನ್ನು ಎಲ್ಲವನ್ನು ತಿಳಿದುಕೊಳ್ಳುವ ಬಯಕೆ . ಸಮಯ ಸಿಕ್ಕಾಗಲೆಲ್ಲ ರಾಜೇಶ್ ಹಾಡುವುದನ್ನು ಕೇಳುತ್ತಿದ್ದಳು . ಅನ್ನುವಿಗೆ, ರಾಜೇಶ್ ಒಬ್ಬ ಆತ್ಮೀಯ ಗೆಳೆಯ . ಕಾಲೇಜಿನಲ್ಲೂ ಸಹ , ಅವಕಾಶ ಸಿಕ್ಕಾಗ ಇಬ್ಬರು ಸೇರಿ ಕನ್ನಡದ ಯುಗಳ ಗೀತೆಗಳನ್ನ ಹಾಡಿ ಸಭಿಕರನ್ನ ರಂಜಿಸುತ್ತಿದ್ದರು. 

ಅನ್ನುವಿಗೆ, ಗೆಳತಿಯರಲ್ಲಿ ಜೀವದ ಗೆಳತಿಯೆಂದರೆ ರಶ್ಮಿ . ಕಾಲೇಜಿನಲ್ಲಿ ಇವರನ್ನ ಕಂಡರೆ ಅವಳಿ -ಜವಳಿ ಅನ್ನುತ ಸಹಪಾಠಿಗಳು ರೇಗಿಸುವುದುಂಟು. ಇಬ್ಬರಲ್ಲಿ ಅಷ್ಟೊಂದು ಆತ್ಮೀಯತೆ -ಅನ್ನೋನ್ಯತೆ. ಸಹಜವಾಗಿ ಇಬ್ಬರು ಒಂದೇ ಓಣಿಯವರಾದುದರಿಂದ ಸ್ನೇಹ ಸಲುಗೆ ಸಾಮಾನ್ಯವಾಗಿತ್ತು. 

ರಾತ್ರಿ ತುಂಬಾ ಮಳೆಸುರಿದುದರಿಂದ , ಬೆಳಗ್ಗೆ ಚುಮು -ಚುಮು ಚಳಿ . ಬೆಂಗಳೂರಿನ ಟ್ರಾಫಿಕ್ನಿಂದ ತಪ್ಪಿಸಿಕೊಂಡು ನಂದಿ ಬೆಟ್ಟ ಸುತ್ತಿದರೆ ಏನು ಸೊಗಸು ಅನ್ನುತ್ತಲೇ ರವಿವಾರ ಬೆಳೆಗ್ಗೆನೆ ತನ್ನ ಸ್ನೇಹಿತರಿಗೆ ಅನ್ನು ಕರೆಮಾಡಿ, ಎಲ್ಲರನ್ನು ಒಪ್ಪಿಸಿದಳು . ಎಲ್ಲರೂ ತಮ್ಮ ತಮ್ಮ ಸ್ಕೂಟರ್ರು , ಬೈಕ್ಗಳನ್ನ ತೆಗೆದುಕೊಂಡು  ಬಳ್ಳಾರಿ ದಾರಿ ಹಿಡಿದರು .

ಬೆಟ್ಟ ಹತ್ತೂದ್ದಿದಂತೆ ಯುವಕ ಯುವತಿಯರಲ್ಲಿ ರೋಮಾಂಚನ . ಆ ಮುದ ನೀಡುವ ಚಳಿ , ಹಾಗೆ ನೋಡು ನೋಡುತ್ತಿದ್ದಂತೆ ಎಲ್ಲರನ್ನು ಕಾಣದಂತೆ ಮಾಡುವ ಮುಸುಕು ಮುಚ್ಚುವ ಮಂಜು . ರಾಜೇಶ್ ಹಾಗು ಅನ್ನು ಕೈ ಕೈ ಹಿಡಿದುಕೊಂಡು ಓಡಾಡಿದ್ದುದ್ದನ್ನ ರಶ್ಮಿ ನೋಡಿ ನೋಡದವರ ತರಹ ವರ್ತಿಸುತ್ತಿದ್ದಳು. 

ಆ ದಿನ ರಾತ್ರಿ, ರಶ್ಮಿ ಮನೆಗೆ ಬಂದು ಊಟಮಾಡಿ ಮಲಗಲು ಹಾಸಿಗೆಯ ಮೇಲೆ ಹೊರಳಿದಳು . ಏನು ಆಲೋಚಿಸುತ ಮೊಬೈಲ್ ತೆಗೆದು ಅಂದಿನ ನಂಧಿ ಬೆಟ್ಟದ ಫೋಟೋಗಳನ್ನ ನೋಡಲಾರಂಭಿಸಿದಳು . ಅಷ್ಟೊಂದು ಫೋಟೋಗಳ ಮದ್ಯ , ಅನ್ನು ರಾಜೇಶ್ ಒಟ್ಟೊಟ್ಟಿಗೆ ಇದ್ದುದು ಎದ್ದು ಕಾಣುತ್ತಿತ್ತು . ಮನದೊಳಗೆ ಏನೋ ವಿಚಾರಿಸುತ್ತಾ ನಿದ್ದೆಗೆ ಜಾರಿದಳು.

ರಾಜೇಶ್ ಅನ್ನುವನ್ನ ಇಷ್ಟ ಪಟ್ಟಿದುದನ್ನ ಹಲವು ಭಾರಿ ವ್ಯಕ್ತ ಪಡಿಸಿದ್ದ . ಆದರೆ ಅನ್ನು ಅದನ್ನ ಜಾಣತನದಿಂದ ನಿರಾಕರಿಸುತ್ತ ಬಂದ್ದಿದ್ದಳು.

ಅದೊಂದು ದಿನ ಎಕ್ಸಾಮ್ ಫಲಿಂತಾಂಶವಿದೆಯೆಂದು ಅವಸರ ಅವಸರವಾಗಿ ಕಾಲೇಜಿಗೆ ಹೋದಳು . ಇನ್ನೇನು ಕಾಲೇಜು ಹತ್ತಿರ ಬರುತ್ತಿದ್ದಂತೆಯೇ ಇಬ್ಬರು ಮುಸುಕುಧಾರಿಗಳು ಬೈಕ್ ಮೇಲೆ ಬಂದು ಏನೋ ಹೇಳಿದಂತೆ ಮಾಡಿ, ಅವಳ ಮುಖಕ್ಕೆ ಆಸಿಡ್ ಎರೆಚಿ ಪರಾರಿಯಾದರು. ಅನ್ನು ಗಾಡಿಯ ನಂಬರ್ ಪ್ಲೇಟ್ ನೋಡಿ ರ್ರ... ರ್ರ..ರ್ರ  ಅನ್ನುತ ಮಾತೆ ಬರದೇ ನೋವಿನಿಂದ ನರಳುತ್ತ ಕುಸಿದು ಬಿದ್ದಳು . ಅದೇ ದಾರಿಯಲ್ಲಿ ಸಾಗುತ್ತಿದ್ದ ಅವಳ ಗೆಳತೀ ರಶ್ಮಿ ಮನೆಯವರಿಗೆ ಕರೆ ಮಾಡಿ , ಹಾಸ್ಪಿಟಲಿಗೆ ಸೇರಿಸದಳು . ಅವಳ ಅಂದವಾದ ಮುಖ ಸುಟ್ಟು ವಿಕಾರವಾಗಿತ್ತು.

ಸಿಸಿಟಿವ್ ಫೂಟೇಜ್ ತೆಗೆದು ನೋಡಿದಾಗ , ಪೊಲೀಸರಿಗೆ ಅಚ್ಚರಿ ಕಾದಿತ್ತು . ಸುಳಿವು ಸಿಕ್ಕಮೇಲೆ ಪೊಲೀಸರು ನಗರದ ಗಾಂಧಿ ಬಜಾರ್ಗೆ ಬಂದು ಆರೋಪಿಯನ್ನ ಹುಡುಕಲಾರಂಭಿಸಲಿದರು. ಅಣ್ಣಮ್ಮನ ಜಾತ್ರೆಯಲ್ಲಿ ಸೇರಿದ್ದ ಜನರನ್ನ ಸರಿಸುತ್ತ ಒಳಗಡೆ ನುಗ್ಗಿದರು . ಜೋರಾಗಿ ಹಾಡುತ್ತಿದ್ದ ಆರ್ಕೆಸ್ಟ್ರ ದಿಂದ ರಾಜೇಶನನ್ನ ಕೈ ಕಾಲು ಕಟ್ಟಿ ದಬ್ಬಾಳಿಕೆಯಿಂದ ಪೊಲೀಸ ಕಚೇರಿಗೆ ಒಯ್ದು ಸರಿಯಾಗಿ ಬಿಟ್ಟರು . ಅವನಿಗೆ ಮಾತಾಡಲು ಅವಕಾಶ ಕೊಡದೆ ಹಿಂಸಿಸಿದರು . ಅವನ ಚೀರಾಟಕ್ಕೆ ಧ್ವನಿ ಬಿದ್ದೆ ಹೋಯ್ತು . 

ಅವಳ ಮನೆಯವರಿಗಂತೂ ದಿಕ್ಕು ತೋಚದಾಗಿತ್ತು . ಬೀದಿಯಲ್ಲಿ ಹೆಣವಾಗಿ ಬೀಳಬಹುದಿತ್ತ ಅನ್ನುವನ್ನ ರಕ್ಷಿಸಿದಕ್ಕೆ, ರಶ್ಮಿಗೆ  ಮನೆಯವರು  ಋಣಿಯಾಗಿದ್ದರು. ಆದರೆ ಅನ್ನುವಿಗೆ ಅವಳ ಹೆಸರನ್ನ ಕೇಳಿದರೆ ಸಾಕು, ದೇಹದಲ್ಲಿ ಬದಲಾವಣೆ ಕಾಣುತ್ತಿತ್ತು . ಮನೆಯವರಿಗಂತೂ ಅದನ್ನ ನೋಡಿ " ಏನು ಗೆಳೆತನ !? ರಷ್ಮಿಯನ್ನ ಕಂಡರೆ ಅನ್ನುವಿಗೆ ಏನೋ ಹೇಳುವಾಸೆ !. ಆದರೆ ಏನು ಮಾಡುವುದು ? ಅದನ್ನ ವ್ಯಕ್ತ ಪಡಿಸಲಿಕ್ಕೆ ಅವಳಿಂದಾಗದು !" ಹೇಳಿ ನಿಟ್ಟಿಸುರು ಬಿಡುತ್ತಿದ್ದರು.

ಒಂದು ದಿನ ಕಾಲೇಜಿನ ಪ್ರಾಂಶುಪಾಲರು ಕರೆ ಮಾಡಿ , ಅನ್ನು ಫಸ್ಟ್ ರಾಂಕ್ ಬಂದಿದ್ದನ್ನ ತಿಳಿಸಿದರು . ಅನ್ನು ಸದಾ ಲವಲವಿಕೆಯಿಂದ ಓಡಾಡುತ್ತಿದ್ದವಳು. ಯೀಗ ಕತ್ತಲೆ ಕೊನೆಯಲ್ಲಿ ಅಂಧಕಾರವನ್ನು ಒಪ್ಪೊಕೊಂಡಿದ್ದಾಳೆ . ಅವಳಿಗೀಗ ಏನು ಕೇಳಿಸದು , ಕಾಣಿಸದು . ಆಸಿಡ್ ಅವಳೆಲ್ಲ ಸೌಭಾಗ್ಯಗಳನ್ನ ಸುಟ್ಟುಹಾಕಿತ್ತು.

ಅಕ್ಕ , ಚನ್ನ ಮಲ್ಲಿಕಾರ್ಜುನನ ಹುಡುಕುತ್ತ ಪರ್ವತೇವೇರಿ , ಕದಳಿ ವನದಲ್ಲಿ ಕಾಲ ಕಳೆದಳು. ಅನ್ನು ಯಾರನ್ನ ನೆನೆದು ಮುಕ್ತಿಹೊಂದುವಳು ?!.