Thursday 5 May 2022

ನಮ್ಮ ಕೆಂಪು ನಾಯಿ

 ನಮ್ಮ ಕೆಂಪು ನಾಯಿ

-----------------------------------

ರೊಟ್ಟಿ ,ನುಚ್ಚು , ಕಾಯಿ ಪಲ್ಲೆ , ಕುಟ್ಟಿದ ಮೆಣಸಿನ ಕಾಯಿ ,ಮೊಸರು ಹಾಗು ಮಜ್ಜಿಗೆ ಹೀಗೆ ಆ ದಿನದ ಅಡಿಗೆಯನ್ನ ಒಂದು ದೊಡ್ಡದಾದ ಬುಟ್ಟಿಯಲ್ಲಿ ಜೋಡಿಸಿಕೊಂಡು ಅವ್ವ ಮೆನೆಯ ಕೆಲಸ ಮುಗಿಯಿಸಿ , ಸೂರ್ಯ ನೆತ್ತಿಯ ಮೇಲೆ ಬರುವಷ್ಟರಲ್ಲೇ ತೋಟದ ಕೆಲಸಕ್ಕೆ ತಯ್ಯಾರಾಗುತ್ತಿದ್ದರು. ಅದನ್ನೆಲ್ಲಾ ಮನೆಯ ನುಚ್ಚಿನಕಿಯ ಮೇಲೆ ಕೂತು ಗಮನಿಸುತ್ತಾ ಕೂತಿರುತ್ತಿದ್ದೆ .

ರೊಟ್ಟಿಯ ಬುಟ್ಟಿ ಹುಲ್ಲಿ ಕಟ್ಟಿಗೆಯಿಂದ ಮಾಡಲ್ಪಟ್ಟಿರುತ್ತಿತ್ತು . ಅದರ ಜುಪಾದ ಎಲೆಗಳನ್ನ ಸವರಿ ಬಿಸಿಲಿಗೆ ಒನ ಹಾಕುತ್ತಿದ್ದರು. ಸರಿಯಾಗಿ ಒಣಗಿದ ಮೇಲೆ ಗರಿಗಳನ್ನ ಹೆಣೆದು ಬುಟ್ಟಿಮಾಡುತ್ತಿದ್ದರು . ಇದನ್ನೇ ಒಂದು ಕುಲ ಕಸಬು ಮಾಡಿಕೊಡಿದ್ದ ಕುಶಲ ಕರ್ಮಿಗಳು ಊರಲ್ಲಿಯಿದ್ದರು. ಅವ್ವ ಬುಟ್ಟಿಯ ಸುತ್ತಲೂ ಗೋವಿನ ಸೆಗಣಿಯಿಂದ ಸಾರಿಸಿ ಅದಕ್ಕೆ ಅಂದ ಚೆಂದವನ್ನ ಕೊಟ್ಟಿದ್ದರು.

 ಅವ್ವ ಹೊರಡಲು ಇನ್ನೇನು ಮನೆಯ ಹೊಸ್ತಿಲವನ್ನು ದಾಟುತ್ತಿದ್ದಂತೆ ,ನಾನು ಕೆಳಗೆ ಇಳಿದು ಅವರ ಬೆನ್ನು ಹತ್ತುತ್ತಿದ್ದೆ .


ಮ್ಯಾಲಕಿನ ತೋಟ ಊರಿಂದ ಸುಮಾರು ೨ ಕಿಲೋಮೀಟರು ದೂರ ;ಮನೆಯಿಂದ ಅನಾಯಸವಾಗಿ ನಡಿದೆ ಹೋಗುವ ದಾರಿ . ತೋಟವು ಊರಿನ ಮನೆಯ ಹಿಂದೆ ಅಂದರೆ ಸೂರ್ಯಾಸ್ತ್ರವಾಗುವ ಕಡೆಗೆ ಇರುವುದರಿಂದ ಮನೆಯವರು ಅದನ್ನ ಮ್ಯಾಲಕಿನಾ ತೋಟವೆಂದು ಹೇಳುತ್ತಿದ್ದರು. ತೋಟದ ಮನೆಯಿಂದ ಒಬ್ಬ ಅಥಿತಿ ,ನಾವು ಇನ್ನು ಅರ್ಧ ಕಿಲೋಮೀಟರು ದೂರ ಇರುವಾಗಲೇ ನಮ್ಮಣ್ಣ ನೋಡಲು ಓಡಿ ಬಂದಿರುತ್ತಿದ್ದ . ಅದು ನಾವು ಆಗಮಿಸುತ್ತಿರುವುದು ಅವನಿಗೆ ಹೇಗೆ ಗೊತ್ತಾಗುತ್ತಿತ್ತೋ ?. ದೇವರೇ ಬಲ್ಲ! . ಬಾಲಲ್ಲಾಡಿಸುತ ಸುಮ್ಮನೆ ನಿಲ್ಲೋ ಪ್ರಾಣಿಯಲ್ಲ ಅದು . ಅವ್ವ ಹೊತ್ತಿರುವ ರೊಟ್ಟಿಯ ಬುಟ್ಟಿ ಮುಟ್ಟುವತನಕ ಜಿಗಿಯುತ್ತಿದ್ದ . ನೋಡಲು ಕೆಂಪು ಕೆಂಪಾಗಿ ಕಂಡು ಬರುತ್ತಿದ್ದರಿಂದ ಅವನನ್ನ ಕೆಂಪು ನಾಯಿ ಎಂದೇ ಮನೆಮಂದಿ ಕರೆಯುತ್ತಿದ್ದರು. ಕೆಣಕಿದರೆ ತೋಳವೇ ಸರಿ !.

ಅಪ್ಪಿ ತಪ್ಪಿ ಯಾರಾದ್ರೂ ಹಚ್ಯಾ ಎಂದು ಕಲ್ಲೆಸೆದ್ರು..!? ,ಮುಗಿತು ಕಥೆ ! . ಎಸೆದ ಕಲ್ಲನ್ನ ಹುಡುಕಿ ತನ್ನ ಚೂಪಾದ ಹಲ್ಲುಗಳಲ್ಲಿ  ಹಿಡಿದು ತನ್ನ ಆಕ್ರೋಶವನ್ನ ಹೊರಹಾಕುತ್ತಿತ್ತು . ಮೆನೆಯವರೇ ಆದರು ಸರಿ ಎಸೆದ ಕಲ್ಲನ್ನ ಹುಡುಕಿ ಗುರ್ ಅನ್ನುತ್ತಲೇ ಕಚ್ಚಿ ಹಿಡಿಯುತ್ತಿತ್ತು . ಇದು ಅದರ ಒಂದು ವಿಶಿಷ್ಟ ಸ್ವಭಾವವಾಗಿತ್ತು .ನಮ್ಮ ತೋಟದ ಮನೆಯ ದನದ ಕೊಟ್ಟಿಗೆ ಹಾಗು ಸುತ್ತ-ಮುತ್ತ ಇರೋ ಹೊಲವನ್ನ ರಕ್ಷಣೆ ಮಾಡೋ ಕೆಲಸ ತನ್ನಮೇಲೆ ಸ್ವಯಂಘೋಷಿತವಾಗಿ ಹೆರುಕೊಂಡಿದ್ದ ಜೀವ ಅದು . ಹೀಗಾಗಿ ತೋಟದ ಮನೆಗೆ ಯಾರೇ ಬಂದ್ರು ಮೊದಲು ಅವನನ್ನ ಹಿಡಿದು ಒಂದು ಕಡೆ ಕಟ್ಟಿ ಆಮೇಲೆ ಬಂದವರನ್ನ ಬರಮಾಡಿಕೊಳ್ಳ ಬೇಕಿತ್ತು .


ಮ್ಯಾಲಕಿನ ತೋಟದಲ್ಲಿ ಹೆಚ್ಚಾಗಿ ಬೆಳಿಯುತ್ತಿದ್ದು ಅರಿಸಿನ . ಇದು ನಮ್ಮ ಭಾಗದ ಒಂದು ಪ್ರಮುಖ ಬೆಳೆ. ಪ್ರತಿ ವರ್ಷ ಮಾರ್ಚ್ ಇಲ್ಲ ಏಪ್ರಿಲ್ನಲ್ಲಿ ಕಟಾವು ಮಾಡಿ , ಮನ್ನಿನ್ನಲ್ಲಿ ಹುದುಗಿರುವ ಬಂಗಾರವನ್ನ ಹೊರ ತೆಗೆಯಬೇಕಿತ್ತು . ಅರಿಶಿನವು ರೈತರ ಬಾಳಿಗೆ ಬಂಗಾರಕ್ಕಿಂತಲೂ ಹೆಚ್ಚು ಅನ್ನುವ ಕಾಲ ಅದು . ಅರಿಸನವನ್ನ ಮಣ್ಣಿಂದ ತೆಗೆಯುವುದು , ಕೋಲಾರದ ಘಣಿಯಿಂದ ಚಿನ್ನ ತೆಗೆಯುವ ಕೆಲಸಕ್ಕೆ ಸಮ ಅನ್ನುವಷ್ಟರಮಟ್ಟಿಗೆ ಕಷ್ಟದಾಯಕವಾಗಿತ್ತು!. ಅರಿಶಿನವು ವಾರ್ಷಿಕ ಬೆಳೆಯಾದುದರಿಂದ ತುಂಬಾ ಶ್ರಮದಾಯಕ ಹಾಗು ಮಿತಿಮೀರಿದ ಕೆಲಸವಾಗಿತ್ತು . ಒಂದು ಬದಿಯ ಎರಡು ಕಡೆ ಅರಿಶಿನವು ಆಳವಾಗಿ ಇಳಿದಿರುತ್ತಿತ್ತು . ಇತರಹ ಸಾವಿರಾರು ಬದಿಗಳು ಮುನ್ನೂರೋ ಇಲ್ಲ ಐನೂರೋ ಉದ್ದ ಇರೋವು . ಸಾಲನ್ನ ಹಿಡಿದು , ಎರಡು ಮುಖದ ಗುದ್ದಲಿನಿಂದ ಅಗೆದು , ಹುದುಗಿರುವ ಅರಿಶಿನ ಪೆಂಟೆಯನ್ನ ಹೊರ ತೆಗೆದು ಹಾಕೋದು ಎಂಟೆದೆಯ ಬಂಟನ ಕೆಲಸವಾಗಿತ್ತು. ಹಡ್ಡವರು(ಅಗೆಯುವವರು) ಮುಂದೆ ಹಡ್ದುತ್ತ ಹೋದಂತೆ , ಅವರನ್ನ ಹಿಂಬಾಲಿಸುತ್ತ ಅರಿಶಿನ ಪೆಂಟೆಯನ ಮುರಿದು , ಅರಿಶಿನ ಮತ್ತು ಅದರ ಬೀಜವನ್ನ ಬೇರ್ಪಡಿಸುತ್ತ ಗುಂಪು ಹಾಕೋ ಮತ್ತೊಂದಿಷ್ಟು ಆಳುಗಳು . ಅರಿಸಿನ ಚೆನ್ನಾಗಿ ಬಂದಿದ್ದರೇ , ಕೈ ಬೆರಳುಗಳಂತೆ ಕಂಡು ಭೂಮಿಯಲ್ಲಿ ಹುದುಗಿರುತ್ತಿದ್ದವು. ಅವುಗಳನ್ನ ಹನಿಗೇಗಳಂತೂ ಕರೆಯುತ್ತಿದ್ದರು .


ಹೀಗೆ ಗುಂಪಾಗಿ ಬಿದ್ದಿರೋ ಅರಿಶಿಣವನ್ನ ಚಕ್ಕಡಿಯಲ್ಲಿ ಸಾಗಿಸಿ ಅರಿಸಿನ ಒಲೆಯ ಹತ್ತಿರ ಇನ್ನೊಂದು ದೊಡ್ಡ ಗುಂಪು ಹಾಕೋದು . ಇದು ಸುಮಾರು ೧೦ ರಿಂದ ೧೫ ದಿನಗಳ ತೆಗೆದು ಕೊಳ್ಳುವ ಬಹಳ ಪರಿಶ್ರಮದ ಕೆಲಸವಾಗಿತ್ತು . ಇಲ್ಲಿಗೆ ಅರಿಶಿನವು ಸಾಂಗ್ಲಿ ಅಡತಿಗೆ ಹೋಗಿ ಬೀಳುವುದಿಲ್ಲ ; ಇನ್ನು ಬಹಳ ಕೆಲಸ ಉಳಿದಿರುತ್ತಿತ್ತು. ಹೀಗೆ ಬಿದ್ದಿರುವ ಅರಿಶಿಣವನ್ನ ದೊಡ್ಡದಾದ ಗಂಗಾಳದಲ್ಲಿ ಹಾಕಿ ನೀರಿನಲ್ಲಿಕುದಿಸಬೇಕಿತ್ತು. ಕತ್ತರಿಸಿ ಹಾಕಿದ್ದ ಅರಿಶಿನದ ತಪ್ಪಲೆ  ಊರವಲು ಆಗಿ ಉಪಯೋಗವಾಗುತ್ತಿತ್ತು .

 

ಎಷ್ಟೋ ಸಲ ಅವಸರದಲ್ಲಿ ತಪ್ಪಲನ್ನ ಒಲೆಯ ಒಳಗಡೆ ತಳ್ಳಲು ಹೋಗಿ ಜನ ಕೈ ಸುಟ್ಟುಕೊಂಡಿದ್ದು ಕೇಳಿ ಸ್ವಲ್ಪ ಜಾಗೂರುಕತೆಯಿಂದ ಕೆಲಸ ನಿರ್ವಹಿಸುತ್ತಿದ್ದರು . ಅರಿಶಿನವು ಎಷ್ಟು ಕುದ್ದರೆ ಸರಿ ಅನ್ನುವ ಲೆಕ್ಕಾಚಾರಗಳು ಗೊತ್ತಿರುವುದು ಬಹಳ ಮುಖ್ಯವಾಗಿತ್ತು . ನುರಿತ ಅನುಭವಿಯು,ಅವಾಗ ಅವಾಗ ಅರಿಶಿಣವನ್ನ ಹಿಚುಕಿ ನೋಡಿ ಗಂಗಾಳವನ್ನ ಇಳಿಸೋ ಸೂಚನೆಯನ್ನ ಬೇರೆಯರಿಗೆ ಕೊಡುತ್ತಿದ್ದ . ಹೀಗೆ ಅರಿಸಿನ ಕುದ್ದಮೇಲೆ ಅದನ್ನ ಬೇರೊಂದು ಕಡೆ ಹರಡುಬೇಕಿತ್ತು . ಅಜಮಾಸು ಒಂದು ವಾರ ಬಿಸಿಲಿಗೆ ಒಣಹಾಕಬೇಕಿತ್ತು . ಸಂಪೂರ್ಣ ಒಣಗಿದಮೇಲೆ ಅವುಗಳನ್ನ ಹೊಳಪು ಮೂಡಿಸಲು ಗಾಡದಲ್ಲಿ ಹಾಕಿ ಮೇಲೆ ಕೆಳಗೆ ಮಾಡಿ ಸುತ್ತಬೇಕಿತ್ತು . ಗಾಡವು ಒಂದು ಬ್ಯಾರೆಲ್ . ಅದರಲ್ಲಿ ರಂದ್ರಗಳನ್ನ ಮಾಡಲಾಗಿರುತ್ತಿತ್ತು . ಒಳಗಡೆ ಹರಿತವಾದ ಕಬ್ಬಿಣದ ಹಲ್ಲುಗಳು, ಗಾಡವನ್ನ ತಿರುವುತ್ತಾ ಹೋದಂತೆ ,ಒಣಗಿದ ಅರಿಶಿನಗಳು ಈ ಹಲ್ಲುಗಳಿಗೆ ಒಂದೇಸಮನೆ ತಿಕ್ಕಿ ತಿಕ್ಕಿ ಮೇಲಿನ ಪದರು ಉದುರಿ ಹೋಗಿ ಬಂಗಾರದ ಬಣ್ಣಕ್ಕೆ ತಿರುಗುತ್ತಿದ್ದವು . ಹಗಲು ರಾತ್ರಿ ಗಾಢ ತಿರುಗಿಸುವುದರಿಂದ ಅಂಗೈಯಲ್ಲಿ ಹುಣ್ಣುಗಳು ಹುಟ್ಟಿದ್ದು ಹಳದಿ ಬಣ್ಣದಿಂದ ಮರೆಯಾಗಿ ಕಂಡುಬರುತ್ತಿರಲಿಲ್ಲ.     ಅಲ್ಲಿಗೆ ಅವುಗಳ್ಳನ್ನ ಒಂದು ಮುಂಬೈ ಚಿಲಿನಲ್ಲಿ ಹಾಕಿ ಬೇರೊಂದು ಕಡೆ ಇಟ್ಟು ಮುಂದಿನ ಗಾಡಕ್ಕೆ ತಯ್ಯಾರಿ ಮಾಡಿಕೊಳ್ಳಲಾಗುತ್ತಿತ್ತು . 


ಒಂದರಮೇಲೊಂದು ಅರಿಶಿನದ ಚಿಲುಗಳನ್ನ ಮಾವಿನ ಮರದ ಕೆಳಗಡೆ ಇಡಲಾಗಿತ್ತು . ಇವೆಲ್ಲವೂ ಸಾಂಗಲಿ ಅಡತಿಗೆ ಹೋಗಲು ಒಂದು ಒಳ್ಳೆ ಧಾರನಿಗೆ ಕಾಯುತ್ತಿದ್ದವು . ಸಾಂಗಲಿಯು ನೆರೆಯ ಮಹಾರಾಷ್ಟ್ರ ರಾಜ್ಯದ ಒಂದು ತಾಲೂಕು ಪಟ್ಟಣವಸ್ಟೇ ಅಲ್ಲ , ಅದು ಸುತ್ತಮುತ್ತಲಿನ ಸುಪ್ರಸಿದ್ದ ವಾಣಿಜ್ಯ ಕೇಂದ್ರವಾಗಿತ್ತು. ತೋಟದ ಕೆಳಭಾಗಲ್ಲಿ ಒಂದು ದೊಡ್ಡದಾದ ಒಡ್ದು. ಮಳೆಗಾಲದಲ್ಲಿ ಸುರಿದ ಮಳೆ ಈ ಬದಿಯಿಂದ ಹರಿದು ಮುಂದೆ ಹಳ್ಳ ಸೇರುತ್ತಿತ್ತು . ಬದಿಯು ದೊಡ್ಡದಾಗಿದ್ದು ಫಲವತ್ತಾದ ಮಣ್ಣಿನಿಂದ ತುಂಬಿಕೊಂಡಿರುವುದರಿಂದ ಅದರ ಎಡ -ಬಲ ಗಿಡ-ಗಂಟಿಗಳಿಂದ ,ಮರಗಳಿಂದ , ಬಿದಿರು ಬೆಟ್ಟಗಳಿಂದ ದಟ್ಟವಾಗಿ ಕಂಡು ಒಂದು ಸಣ್ಣ ಅರಣ್ಯ ಕಂಡಂತೆ ಹಸಿರುನಿಂದ ಕಂಗೊಳಿಸುತ್ತಿತ್ತು. ಒಂದು ಮೂಲೆಯಲ್ಲಿ ಎರಡು ಮಾವಿನ ಮರಗಳು ೫೦ ಮೀಟರ್ ದೂರದ ಅಂತರದಲ್ಲಿ ಬೆಳೆದು ನಿಂತ್ತಿದ್ದವು . ಅವುಗಳ ಹಣ್ಣುಗಳ ರುಚಿ ಆಧಾರದ ಮೇಲೆ ಮರಗಳಿಗೆ ಹೆಸರು ಬಂದಿದೆ . ಸಕ್ಕರೆತಿಂದಷ್ಟು ಸಿಹಿಯಾಗಿರುವ ಮಾವಿನ ಮರವನ್ನ ಸಕ್ಕರೆ ಮಾವು ಎಂದು ಹಾಗು ಗೌರಿ ಹುಣ್ಣುಮೆಗೆ ಮಾವುಬಿಡುವ ಮರವನ್ನ ಗೌರಿಮಾವು ಎಂದು ಮನೆಯವರು ಹೆಸರಿಟ್ಟಿದ್ದರು.


ನಮ್ಮ ಮೆನೆಯ ಮಕ್ಕಳ ಸೈನ್ಯವೆಲ್ಲ ಈ ಮಾವುಗಳ ಅಡಿಯಲ್ಲೇ ಬಾಲ್ಯವನ್ನ ಕಳೆದದ್ದು. ಪ್ರತಿ ವರ್ಷ ಮಾವಿನ ಕಾಯಿಗಳಿಂದ ಮರಗಳ ಟೊಂಗೆಗಳು ಭಾರದಿಂದ ಜೋತು ಬೀಳುತ್ತಿದ್ದವು.ಹಸಿ ಮಾವಿನ ಕಾಯಿ ಮತ್ತು ಉಪ್ಪು ;ಬಾಯಲ್ಲಿ ನೀರು . ಸಾವಿರಾರು ಮಾವುಗಳನ್ನ ಕೊಡುವ ಮರಗಳು . ಮಕ್ಕಳಿಗೆಲ್ಲ ಒಂದು ಸುಗ್ಗಿಯ ಕಾಲ ಇದು . ಯಾವುದಾರೊಂದು ಮಾವು ಕೆಳಗೆ ಬಿದ್ದಿತ್ತಂದರೆ ಅದನ್ನ ಒತ್ತಿ ಒತ್ತಿ ನೋಡಿ ಹಣ್ಣಿಗೆ ಬಂದಿದೆಂದು ಖಚಿತಪಡಿಸಕೊಳ್ಳಬೇಕಿತ್ತು. ಯಾವುದಾದರೊಂದು ಅರೆಹಣ್ಣು ಕಂಡರೆ ಇಡೀ ಮಾವಿನ ಮರದ ಹಣ್ಣುಗಳು ಹಣ್ಣಿಗೆಬಂದಂತೆ .ಅರೆಮಾವಿನ ಹಣ್ಣನ್ನ ಪಾಡಗಾಯಿ ಅನ್ನುತ್ತಿದ್ದರು . ಮನೆಯ ಅಜ್ಜಿಗೆ ತೋರಿಸಿದಮೇಲೆ ಅದನ್ನ ಅವರು ಪಾಡಗಾಯಿಯೆಂದು ಖಚಿತಪಡಿಸುತ್ತಿದ್ದರು .


ಮನೆಯವರು ಮಾವಿನಕಾಯಿಗಳನ್ನ ಹರಿಯಿವುದು ಅಷ್ಟು ಸುಲಭವಾಗಿರಲಿಲ್ಲ. ಮರಗಳು ಎತ್ತರವಾಗಿರುವುದರಿಂದ ಹಾಗು  ರೆಂಬೆ -ಟೊಂಗೆಗಳಿಂದ ಮಾವುಗಳನ್ನ ಹರಿದು ಕೆಳಗೆ ಕೊಡುವುದು ಅಷ್ಟೊಂದು ಅನಾಯಸದ ಕೆಲಸವಾಗಿರಲಿಲ್ಲ . ಕಾಯಿಗಳನ್ನ ಕೆಳಗೆ ಇಳಿಸುವಾಗ ಪೆಟ್ಟಾದರೆ ಹಣ್ಣಾಕಿದಮೇಲೆ ಕೊಳೆತು ಹೋಗುತ್ತಿದ್ದವು. ನಾಜೂಕಿನ ಕೆಲಸವಾದುದರಿಂದ  ಊರಿನಲ್ಲಿ ಒಂದೆರಡು ಮನೆತನಗಳು ಇದನ್ನ ಕುಲಕಸುಬಾಗಿ ಮಾಡಿಕೊಂಡಿದ್ದರು . ಈ ಕೆಲಸದಲ್ಲಿ ತೊಡಗಿರುವವನ್ನ ಮಾವಿನ ಕಾಯಿ ಇಳಿಸುವವ ಎಂದು ಕರೆಯುತ್ತಿದ್ದರು . ಮಾವುಗಳನ್ನ ಇಳಿಸುವ ಪರನಿತರು ತಮ್ಮದೇಯಾದ ಉಪಕರಣಗಳನ್ನ ಹೊಂದಿದ್ದರು . ಒಂದು ಉದ್ದನೆಯ ಬಿದಿರಿನ ಗಳ;ಅದರ ಮುಂದೆ ಒಂದು ತೆಳುವಾದ ವೃತ್ತಾಕಾರದ ಕಬ್ಬಿಣ ಮತ್ತು ಅದರ ಸುತ್ತುವರೆದ ಬೊಗಸೆ ಆಕಾರದ ನಾರಿನಿಂದ ಮಾಡಿದೆ ಜಾಳಿಗೆ . ಇದರಿಂದ ಮಾವನ್ನ ಎಳೆದು ಮರದ ತುಂಬಿನಿಂದ ಬಿಡಿಸಿ , ಜಾಲದಲ್ಲಿ ಹಿಡಿಯುವುದು . ಇದು ಒಂದು ಹಂತ . ಇದಾದ ಮೇಲೆ ಮಾವುಗಳನ್ನ ಜಾಳಿಗೆಯಿಂದ ತೆಗೆದು ಇನ್ನೊಂದು ದೊಡ್ಡದಾದ ನಾರಿನಿಂದ ಮಾಡಿದೆ ಜಾಳಿಗೆ ಹಾಕುವುದು . ದೊಡ್ಡ ಜಾಳಿಗೆ ತುಂಬಿದ ಮೇಲೆ ಅದನ್ನ ಕೆಳಗೆ ನಿಧಾನವಾಗಿ ಇಳಿಸುವುದು . ಕೆಳಗೆ ನಿಂತಿರುವವರು ಅದನ್ನ ಬೇರೆ ಕಡೆ ಎಳೆದು ಗುಂಪು ಹಾಕೋದು . ಗೋದಿ ಹುಲ್ಲನ್ನ ಬೇಕಾದಷ್ಟು ಬಳಿಸಿ ಮಾವುಗಳನ್ನ ಹಣ್ಣಾಗಿಸುವುದು ಒಂದು ಸ್ವಾಭಾವಿಕ ಪ್ರಕ್ರಿಯೆಯಾಗಿತ್ತು . ಕಾಯಿಗಳು ಹಣ್ಣಾಗುತ್ತಿದ್ದಂತೆ ಮನೆಯಲ್ಲ ಮಾವಿನ ವಾಸನೆ ಪಸರಿಸುತ್ತಿತ್ತು.


ಅರಸಿನ ರಾಶಿ ಆದಮೇಲೆ ಚಿಲುಗಳನ್ನ ಗೌರಿ ಮಾವಿನ ಮರದ ಕೆಳಗೆ ಒಟ್ಟಲಾಗುತ್ತಿತ್ತು. ತುಂಬಾ ಬೆಲೆಬಾಳುವ ಬದುಕು ಆದುದರಿಂದ ರಾತ್ರಿ ಕಳ್ಳರ ಹಾವಳಿ . ಕಾವಲು ಕಾಯಲು ದೊಡ್ಡಪ್ಪ ಮತ್ತು ಚಿಕ್ಕಪ್ಪ ಮರದ ಕೆಳಗೆ ಮಲಗಿರುತ್ತಿದ್ದರು. ಒಂದು ದಿನ ಘಾಡ ನಿದ್ರೆಯಿಂದ ಚಿಕ್ಕಪ್ಪ ಮತ್ತು ದೊಡ್ಡಪ್ಪ ಪಕ್ಕದಲ್ಲಿ ಮಲಗಿದ್ದ ನಾಯಿಯ ಬೊಗುಳುವಿಕೆಯಿಂದ ಎದ್ದರು . ಹಾಗೇನೇ ಪಕ್ಕದಲ್ಲಿದ್ದ ಟಾರ್ಚ್ ನ್ನ ನಾಯಿ ಬೊಗುಳುವ ದಿಕ್ಕಿಗೆ ಹಿಡಿದರು . ನಾಯಿ ತನ್ನ ಎರಡು ಕಾಲುಗಳ್ಳನ ಮುಂದೆ ಮಾಡಿ ಜೋರಾಗಿ ಹಾವಿನ ಕಡೆಗೆ ಬೊಗಳುತ್ತಿತ್ತು . ತಕ್ಷಣ ಎಚ್ಚೆತ್ತ ಅವರು ಹಾವನ್ನ ಹೊಡೆದು ಹಾಕಿ ತಮ್ಮ ಪ್ರಾಣವನ್ನ ಕಾಪಾಡಿದ ಶ್ವಾನಕ್ಕೆ ಶರಣೆಂದರು . 


ನಮ್ಮ ಮನೆಯ ಸುತ್ತ-ಮುತ್ತ ಯಾವ ಪ್ರಾಣಿಯಾಗಲಿ ಮನುಶ್ಯರಾಗಲಿ  ಸುಳಿದಾಡುತ್ತಿರಲಿಲ್ಲ. ಒಂದೊಮ್ಮೆ ಸನಿಹ ಬಂದರೆ ಅವರಿಗೆ ಗ್ರಹಚಾರ ಕಾದಿದೆ ಅಂತಲೇ ಹೇಳಬೇಕಿತ್ತು . ನಾಯಿಗೆ ದಿನಾಲೂ  ಗೋವಿನ ಜೋಳದ ನುಚ್ಚು ಹಾಲು ಅಚ್ಚು ಮೆಚ್ಚು. ಆಗಾಗ ಜೋಳದ ರೊಟ್ಟಿ ಕತ್ತರಿಸಿ ತಿನ್ನಲು ಬೇಕಿತ್ತು. ನಾಯಿಗೆ ನಮ್ಮ ಮನೆಯ ಎತ್ತುಗಳೆಂದರೆ ಬಲು ಪ್ರೀತಿ .ಕೆಂಪೆತ್ತು ಅಷ್ಟೇನು ಎತ್ತರವಿರಲ್ಲಿಲ . ಕುಳ್ಳಾಗಿ ಕಂಡರೂ ಅದರ ಶಕ್ತಿಗೆ ಯಾವೂರು ಎತ್ತುಗಳಿಗೆ ಸಮವಿರಲಿಲ್ಲ. ಹಾಗೇನೇ ಬಲು ಮುಂಗೋಪಿ . ಒಮ್ಮೆ ಸಿಟ್ಟಿನಿಂದ ಮೂಗುದಾರ ಜಗ್ಗಿ ಹಿಂದೆ ಸರಿತೆಂದರೆ ಆಯಿತು ಆವತ್ತಿನ ಊಳುಮೆ ಕೆಲಸ ನಿಂತಂತೆ . ಹಾಗಂತ ಬೇಕಾಬಿಟ್ಟಿಯಾಗಿ ವರ್ತಿಸೋ ಸ್ವಭಾವ ಕೆಂಪೆತ್ತಿನದಲ್ಲ. ಬಿಳಿ ಎತ್ತು ಸುಮಾರಾಗಿ ಎತ್ತರ, ಬಣ್ಣ ಬಿಳುಪು . ಮೂಲತಃ ಸಂಭಾವಿತ . ಕೆಂಪತ್ತನ್ನ ಮುಂದೆ ನಡೆಸಿಕೊಂಡು ಹೋಗುವ ಹಿರಿಯ . ಎರಡು ಜೋಡೆತ್ತುಗಳು ಮನೆಗೆ ಬಂದಿದ್ದುರಿಂದ ಆರ್ಥಿಕ ಪರಿಸ್ಥಿತಿ ಸುಧಾರಿಸಿತ್ತು . ಕೆಂಪೇತ್ತಿನ ಕಾಲಲ್ಲಿ ಲಕ್ಷ್ಮಿ ಬಿಳಿಎತ್ತಿನ ಕಾಲಲ್ಲಿ ಅಣ್ಣ ಇದೆ ಅನ್ನೋದನ್ನ ದೇವರ ಹೇಳುವವರು ಹೇಳಿದ್ದರಂತೆ . ಹೀಗಾಗಿ ಅವುಗಳನ್ನ ಮಾರುವ ಗೋಜಿಗೆ ಮನೆಯವರು ಹೋಗಿರಲಿಲ್ಲ . 


 ಎಲ್ಲಾದರೂ ಚಕ್ಕಡಿ ಗಾಡಿ ಹೂಡಿಕೊಂಡು ಹೊರಟರೆ ಸಾಕು ತಾನು ಸಹ ಯಾವುದೊ  ಜವಾಬ್ದಾರಿ ಹೊತ್ತುಕೊಂಡ ನಡೆದ ಮನೆಯ ಯಜಮಾನಂತೆ ಗಂಭೀರವಾಗಿ ಚಕ್ಕಡಿಯನ್ನ ಹಿಂಬಾಲಿಸುತ್ತಿತ್ತು ಕೆಂಪು ನಾಯಿ. ಯಾರಾದರೂ ಚಕ್ಕಡಿ ಹತ್ತಿರ ಬಂದರೆ ಸಾಕು ಗುರ್ರ್ ಅನ್ನುತ್ತಿತ್ತು . ಮದ್ಯಾಹ್ನದ ಬುತ್ತಿಯಲ್ಲಿ ಅದಕ್ಕೂ ಪಾಲಿರುತ್ತಿತು. ಹೊಲದ ಊಳುಮೆ ಮುಗಿದ ಮೇಲೆ ಮತ್ತೆ ಚಕಿಡಿಯನ್ನ ಹಿಂಬಾಲಿಸುತ್ತ ತೋಟದ ಮನೆಗೆ ಹೆಜ್ಜೆ ಹಾಕುತ್ತಿತ್ತು. ಊರು ಸಮೀಪಿಸುತ್ತ ಬಂದರೆ ಭಯ!. ಎಲ್ಲಾದರೂ ಊರ ಬೀದಿನಾಯಿಗಳು ಕಾಳಗಕ್ಕೆ ಇಳಿದು ನಮ್ಮ ನಾಯಿಯನ್ನ ಕಚ್ಚುತ್ತವೆ ಅನ್ನೋದೊಂದು ದುಗುಡ. ನಮ್ಮ ನಾಯಿ ಕಿಲಾಡಿ. ಊರು ಬರುತ್ತಿದ್ದಂತೆ  ಜೋರಾಗಿ ಓಡಿ ಹೋಗಿ ಊರಬಿಟ್ಟು ದೂರದಲ್ಲಿ ಚಕ್ಕಡಿ ಗಾಡಿಗಾಗಿ ಕಾಯುತ್ತಿತ್ತು.



ಕೆಂಪು ನಾಯಿ  ದೊಡ್ಡಪ್ಪ ಹಾಗು ಚಿಕ್ಕಪ್ಪನ ಜೀವ ಉಳಿಸಿದ್ದು ನಮ್ಮ ಮನೆತನದಲ್ಲಿ ಅಳಿಯದೆ ಉಳಿದ ಅಜ್ಜಾಗಿತ್ತು . ಹೀಗಿರಬೇಕಾದರೆ ಒಂದು ದಿನ ಅರಿಸಿನ ಕುದಿಸಿದಮೇಲೆ ಮನೆಯ ನೆರೆಯವರು ಅರಿಶಿನ ಒಲೆಯಲ್ಲಿರುವ ಬೂದಿ ಮಿಸ್ತ್ರಿತ ಬೆಂಕಿಯ ಕೆಂಡವನ್ನ ಒಂದು ಕಡೆ ಹರವಿದ್ದರು. ಮನೆಯ ಪಕ್ಕದಲ್ಲೇ ಇರುವುದರಿಂದ ಸಣ್ಣ ಮಕ್ಕಳಿಗೆ ಬಹಳ ಅಪಾಯಕಾರಿಯಾಗಿತ್ತು . ಹೊರಗಡೆಯಿಂದ ನೋಡಿದರೆ ಬೂದಿ ;ಒಳಗಡೆ ನಿಗಿ ನಿಗಿ ಕೆಂಡ . ಒಂದು ರೀತಿ ಬೂದಿ ಮುಚ್ಚಿದ ಕೆಂಡದಂತೆ ಇತ್ತು. ಆ ದಿನ ತಮ್ಮ ಅಂದರೆ ದೊಡ್ಡಪ್ಪನ ಮಗ ಆಡುತ್ತ ಸೈಕಲ್ ಟೈರ್ ಗಾಲಿಯನ್ನ ಬೂದಿ ಮುಚ್ಚಿದ ಕೆಂಡದಲ್ಲಿ ಕೆಡುವುತ್ತಾನೆ . ಏನು ತಿಳಿಯದ ಮಗು ಒಂದೇ ಸಮನೆ ನೇರವಾಗಿ ಬೂದಿಯಲ್ಲಿ ನಡೆಯುತ್ತಾನೆ . ಬೆಂಕಿಯ ಕೆಂಡದಿಂದ ಅವನ ಕಾಲುಗಳು ಸುಡಲಾರಂಭಿಸುತ್ತವೆ . ಒಂದೇ ಸಮನೆ ಅಳುತ್ತ ಚೀರುತ್ತಾ ಇದ್ದರು ಯಾರು ಅಲ್ಲಿ ಸುಳಿಯಲಿಲ್ಲ. ಮೊದಲೇ ತೋಟದ ಮನೆಆದುದರಿಂದ ಜನ ಬಲು ವಿರಳ. ಅಷ್ಟರಲ್ಲೇ ಮನೆಯ ನಾಯಿ  ಆಗಿರುವ ಅನಾಹುತವನ್ನ ಗಮನಿಸುತ್ತಲೇ ಒಂದೇ ಸಮನೆ ಮಗುವನ್ನ ಅಲ್ಲಿಂದ ಹೊರಗೆ ತರಲು ಆಕಡೆ ಯಿಕಡೆ ಚಿಕ್ಕದಾಗಿ ಬೊಗಳುತ್ತ ಚಡಪಡಿಸುತ್ತದೆ. ತನ್ನಕಡೆಯಿಂದ ಆಗದ ಕೆಲಸವೆಂದು ತಿಳಿದು ಮನೆಯ ಯಜಮಾನನ ಕಡೆಗೆ ಓಡುತ್ತದೆ . ಸಮಯ ಬಹಳ ಕಡಿಮೆ . ಹೆಚ್ಚು ಕಡಿಮೆ ಆದರೆ ಮಗುವಿನ ಪ್ರಾಣಕ್ಕೆ ಸಂಚು ಕಾದಿತ್ತು. ನಮ್ಮ ಚಿಕ್ಕಪ್ಪ ಮನೆಯ ಮುಂದಿನ ಬದಿಯನ್ನು ದಾಟಿ ಕೈಯಲ್ಲಿ ಚಂಬು ಹಿಡಿದು ಬಯಲುಕಡೆಗೆ ಹೊರಟಿದ್ದಿರು . ಹಿಂದಿನಿಂದ ಯಾರೋ ಜೋರಾಗಿ ಬಂದಂತೆ ಅನಿಸಿ ಹಿಂದಿರುಗುವಸ್ಟರಲ್ಲಿ ನಾಯಿ ಒಮ್ಮಿಂದಲೇ ಅವರ ಕೈಯಲ್ಲಿದ್ದ ಚೊಂಬಣ್ಣ ಚೆಲ್ಲಿತು . ಅದು ಅವರಿಗೆ ಏನೋ ಕೇಡಾಗಿದೆ ಬೇಗ ಬನ್ನಿ ಅನ್ನೋ ಸೂಚನೆ ಕೊಟ್ಟಂತಿತ್ತು . ಅವರು ನಾಯಿಯನ್ನ ಹಿಂಬಾಲಿಸುತ್ತ ಮನೆ ಕಡೆಗೆ ಓಡಿದರು. ಮಗುವಿನ ಗೋಳಾಟ ನೋಡಿ ಗಾಬರಿಯಿಂದ ಒಮ್ಮಿಂದಲೇ ಮಗುವನ್ನ ಬೂದಿ ಮುಚ್ಚಿದ ಕೆಂಡದಿಂದ ಹೊರತೆಗೆದರು . ದಿಗ್ಬ್ರಮೆಯಿಂದಲೇ ಆದಷ್ಟು ಬೇಗ ದವಾಖಾನೆ ಕರೆದೊಯ್ದು ಸುಟ್ಟ ಗಾಯಗಳಿಕೆ ಚಿಕಿಸ್ತೆ ಕೊಡಿಸಿದರು. ಆದ ಘಟನೆಯನ್ನ ಚಿಕ್ಕಪ್ಪ ಕಥೆಮಾಡಿ ಮನೆಮಂದಿಗೆ ಹೇಳುತ್ತಿದ್ದಂತೆ ಮನೆಮಂದಿಗೆಲ್ಲ ನಾಯಿಯು ದೈವೀ ಸ್ವರೂಪವಿದ್ದಂತೆ ಕಂಡಿತು.


ಒಂದು ದಿನ ಅವ್ವ ಕಳವಳದಿಂದ ನಾಯಿಯನ್ನು ಬಯ್ಯುತ್ತ " ಹಾಟ್ಯಾಂದು  ಎಲ್ಲ ಹಾಳಾಗೋಯ್ತೋ ?. ಎರಡು ದಿನದಿಂದ ಊಟಕ್ಕಬಂದಿಲ್ಲ! " ಅನ್ನುತ ಗಾಬರಿ ಯಿಂದ ಖಿನ್ನತೆಯನ್ನು ಹೊರಹಾಕುತ್ತಿದ್ದರು . ಅವ್ವನ ಕಳವಳಕ್ಕೂ  ಕಾರಣವಿತ್ತು . ಯಾವತ್ತೂ  ಮನೆ ಸುತ್ತ ಮುತ್ತ , ದನದ ಕೊಟ್ಟಿಗೆ ಹತ್ತಿರ ಕಾಣುವ ನಾಯಿಯು ಕೆಲವು ದಿನಗಳಿಂದ ನಾಪತ್ತೆಯಾಗಿತ್ತು. ಬೆದಿಗೆ ಬಂದ ಹೆಣ್ಣಾಯಿಯ ಬೆನ್ನು ಹತ್ತಿ  ಎಲ್ಲಿಗೆ ಬೇಕೊ ಅಲ್ಲಿಗೆ ಓಡಾಡಿತ್ತುದೆಯಂತ ಮನೆ ನೆರೆಹೊರೆಯವರು ಆಡಿಕೊಳ್ಳುತ್ತಿದ್ದರು . ಕೆಲವು ದಿನಗಳ ನಂತರ ನಾಯಿಯು ಮನೆ  ಸುತ್ತ ಪ್ರತ್ಯಕ್ಷವಾಯಿತು . ಆದರೆ ಅದು ಮೊದಲಿನ ತರಹ ಇರಲಿಲ್ಲ . ಒಂದು ಕಿವಿಯನ್ನ ಕೆಳಗೆ ಮಾಡಿ ಅತ್ತಿತ್ತ ಓಡುತ್ತಿತ್ತು .


ಮನುಷ್ಯರೇ ಹೀಗೆ ಎಲ್ಲ ಪ್ರಾಣಿಗಳಿಗಿಂತ ತಾನು ಶ್ರೇಷ್ಠ ಅನ್ನೋ ಕಾಯಿಲೆಯಿಂದ ಬಳಲುತ್ತಿದ್ದಾನೆ . ಎಲ್ಲವೂ ಸರಿಯಿದ್ದರೂ ತನ್ನ ದುರಾಶೆಗೆ ಸಿಕ್ಕವರ ಮನೆಗೆ ಕೊಳ್ಳಿಯಿಡುತ್ತಾನೆ . 

ನಾಯಿಯು ಒಂದು ಹಂತಕ್ಕೆ ಹುಚ್ಚು ಹಿಡಿದಿದ್ದರು ಸಹಿತ ಸುತ್ತಲಿರುವ ಜನಕ್ಕೆ ಕಚ್ಚಿದಿಲ್ಲ . ತನ್ನ ರೋದನೆಯೊಂದಿಗೆ ಓಡಾಡುತ್ತಿತ್ತು . 


ಊರಲ್ಲಿ ಬೇರೆ ಬೇರೆ ತೋಟಗಳು ಇದ್ದರು ಸಹ ಮೇಲಕಿನ ತೋಟ ನಮ್ಮನೆಲ್ಲ ಕೈ ಬಿಸಿ ಕರೆಯುತ್ತಿತ್ತು . ಒಂದು ದಿನ ತೋಟದ ಮನೆಯ ಹತ್ತಿರ ಸಮೀಪೂಸುತ್ತಿದ್ದಂತೆ ಅಲ್ಲಿ ನಾನು ಒಂದು ಘಟನೆಗೆ ಸಾಕ್ಸಿಯಾದೆ . ನಾಯಿಯು ತನ್ನ ಪಾಡಿಗೆ ಚಿಕ್ಕಪ್ಪನ ಹತ್ತಿರ ನಿಂತಿತ್ತು . ಅದಕ್ಕೆ ಚಿಕ್ಕಪ್ಪ ಅಂದ್ರೆ ಬಲು ಪ್ರೀತೀ . ಅಷ್ಟೇನು ದೊಡ್ಡದಲ್ಲದ ಬನ್ನಿ ಮರಕ್ಕೆ ಹಗ್ಗ ಹಾಕುತ್ತಿದ್ದರು . ನಾನು ಹತ್ತಿರ ಹೋದಂತೆ ಬರ ಬೇಡವೆಂದು ಸನ್ನೆ ಮಾಡಿದರು . ಅವರ ಮುಖದಲ್ಲಿ ಅಷ್ಟೇನು ಖುಷಿ ಇರಲಿಲ್ಲ ;ಚಿಂತೆಯಲ್ಲಿ ಜಾರಿದ್ದರು . ಅವರು ತಮಗೆ ತೋಚಿದಂತೆ 

ಮರಕ್ಕೆ  ಹಗ್ಗ ಹಾಕಿ  ನಾಯಿಯ ಕೊರಳಿಗೆ ಒಂದು ಸುತ್ತು ಹಾಕಿದರು . ಎಂದು ನೋಡದ ನೋಟ ಅದು ! . ಚಿಕ್ಕಪ್ಪ ನೋವಿನಿಂದ ಹಗ್ಗವನ್ನ ಕೆಳಕ್ಕೆ ಎಳೆಯುತ್ತಲೇ ನಾಯಿಯು ತನ್ನ ಕೊನೆಊಸಿರು ಬಿಟ್ಟಿತು . ಹುಚ್ಚು ನಾಯಿಯನ್ನ ಹಾಗೆ ಬಿಟ್ಟರೆ ಯಾರಿಗೂ ಒಳ್ಳೇದಲ್ಲ ಅನ್ನುತಾ ನಿಟ್ಟಿಸಿರು ಬಿಟ್ಟರು ಚಿಕ್ಕಪ್ಪ . ನಾಯಿಯ ಶವವನ್ನ ಮರದಿಂದ ಸ್ವಲ್ಪ ದೂರದಲ್ಲಿ ಮಣ್ಣು ಮಾಡಲಾಯಿತು . ಅರೆ ತಿಳುವಳಿಕೆ ನನಗೆ ಆಗ;ಒಂದು ತಿಳಿಯಲಿಲ್ಲ.



ಕೆಂಪು ನಾಯಿ ಹೋದಮೇಲೆ ಮನೆಯಲ್ಲಿ ಯಾರು ನಾಯಿಯನ್ನ ಸಾಕುವ ಗೋಜಿಗೆ ಹೋಗಲಿಲ್ಲ . ಸುಮಾರು ನಾಲ್ಕು ವರ್ಷಗಳ ನಂತರ ನಮ್ಮ ನೆರೆಯ ಕುರುಬರ ಮಾಯಪ್ಪ ಅಜ್ಜ ಒಂದು ಬಿಳಿ ನಾಯಿ ಮರಿಯನ್ನ ಸಾಕಲು ಕೊಟ್ಟರು . ನಂಗಂತೂ ಎಲ್ಲಿಲ್ಲದ ಹುಮ್ಮಸ್ಸು !. ಅದರ ಜ್ಯೋತೆ ಆಡುತ್ತ ಬೆಳೆದೆ . ಅದು ನೋಡು ನೋಡುತ್ತಲೇ ಬೆಳೆದು ದೊಡ್ಡದಾಯಿತು . 

ಅದಕ್ಕೂ ಅದೇ ಕೆಂಪು ನಾಯಿಯ ಜವಾಬ್ದಾರಿ . ದನದ ಕೊಟ್ಟಿಗೆ ಹಾಗು ತೋಟ ಕಾಯುವಿಕೆ . ಸ್ವಲ್ಪ ಮಟ್ಟಿಗೆ ಕೆಂಪು ನಾಯಿಯ ನೆನಪನ್ನು ಅಳಿಸಿತು ಅನ್ನಲೇಬೇಕು . ಕೆಲವಂದು ಘಟನೆಗಳು ಕೆಂಪು ನಾಯಿಯ ಮರೆಯುವುದು ಅಷ್ಟು ಸುಲಭವಾಗಿರಲಿಲ್ಲ . ನಾಯಿಯು ಸೊಗಸಾಗಿ ಬೆಳೆದಿತ್ತು . ದೂರದಿಂದಲೇ ನೋಡಿ ಗುರು ಹಿಡಿಯಬಹುತ್ತಿತ್ತು ಇದು ನಮ್ಮ ನಾಯಿಯೆಂದು . ಆದರೆ ದುರಾದೃಷ್ಟ ಅಂದ್ರೆ ಇದೆ ಇರಬೇಕು . ಆದಿನ ನಾಯಿಯನ್ನ ಎಲ್ಲಿ ನೋಡಿದರು ಸಿಗಲಿಲ್ಲ . "ಯಾರಿಗೆ ಯೇನ ಮಾಡಿದ್ವಿ ನಾವು ? ನಮ್ಮ ನಾಯಿಗೆ ವಿಷ ಹಾಕಿದರೂ !. ಅವ್ವ ಬೇಸರದಿಂದ ರೇಗಾಡುತ್ತಿತ್ತರು . ನಾನು ಬಿಡಲಿಲ್ಲ; ಗುಡ್ಡದ ಮೇಲೆ ಒಡಿ ಹೋಗಿ ನೋಡಿದೆ . ಒಂದು ತೆಗ್ಗಿನಲ್ಲಿ ಶವವಾಗಿ ಬಿದ್ದಿರುವುದನ್ನ ಕಂಡು ಹೃದಯ ತುಂಬಿ ಬಂತು . ನಾಯಿಯು ಅವರ ಇವರ ತೋಟಕ್ಕೆ ಹೋಗಿ ಹಸಿ ಗೋವಿನ ಜೋಳವನ್ನು ತಿನ್ನುತ್ತಿತ್ತಂತೆ . ಅದಕ್ಕೆ ಊಟಕ್ಕೆ ವಿಷ ಬೇರೆಯಿಸಿ  ಕೊಂದರಂತೆ. ಹೀಗೆ  ಗಾಳಿಸುದ್ದಿಯು ಅದು ಹೋದಮೇಲೆ ಹರದಾಡುತ್ತಿತ್ತು .


------------------------------------------------------------------------------------------------------


ಬಿಳಿ ನಾಯಿ ಮರೆಯಾದಮೇಲೆ ತೋಟದ ಮನೆಗೆ ಏನೋ ಕೊರತೆ ಎದ್ದು ಕಾಣುತ್ತಿತ್ತು. ಮನೆಯವರು ಮತ್ತೊಂದು ನಾಯಿಯನ್ನ ಸಾಕುವ ಉಸಾಬರಿಗೆ ಹೋಗಲಿಲ್ಲ . ಹಾಗೆ ದಿನ ಕಳೆದವು . 

 ರೈತಾಪಿ ಜನರು ಹೊಲ , ತೋಟ-ಗದ್ದೆ , ದನ-ಕರ ಇದೆ ಅವರ ಪ್ರಪಂಚ . ಮನೆಯಲ್ಲಿ ಎರಡು ಕೊಟ್ಟಿಗೆಗಳು . ಒಂದು ಕೊಟ್ಟಿಗೆ ಎಮ್ಮೆಗಳಿಗೆ ಆದರೆ ಇನ್ನೊಂದು ಕೊಟ್ಟಿಗೆ ಆಕಳುಗಳಿಗೆ . ಆಕಾಲದಲ್ಲಿ ನಮ್ಮಜ್ಜಿಗೆ ತವರು ಮನೆಯವರು ಬಳುವಳಿಯಾಗಿ ಒಂದು ಎಮ್ಮೆ ಕರು ಕೊಟ್ಟಿಂದ್ದರಂತೆ. ಅದರಿಂದ ನಾಲ್ಕಾರು ಸೂಲುಗಳನ್ನ ಎಯಿಸಿಕೊಂಡು ಅದರಿಂದ ಬಂದ ಹೈನಿನಿಂದ ತಮ್ಮ ಆರು ಮಕ್ಕಳನ್ನು ಸಾಕಿದರಂತೆ  ನಮ್ಮ ಅಜ್ಜಿ . 


--to be continued